ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಕೂದಲೆಳೆ ಅಂಚಿನಲ್ಲಿ ವಿದ್ಯಾರ್ಥಿಗಳು ಪ್ರಾಣಪಾಯದಿಂದ ಪಾರಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ನಗರದ ಹಳೆಯ ಡಿಡಿಪಿಐ ಕಚೇರಿ ಹಿಂಭಾಗದಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದ ಕೊಠಡಿಯಲ್ಲಿ ಬೆಳಿಗ್ಗೆ 10 ಗಂಟೆ ಸುಮಾರು ವಿದ್ಯಾರ್ಥಿಗಳು ಪಾಠ ಕೇಳುವ ಸಂದರ್ಭದಲ್ಲಿ ಏಕಾಏಕಿ ಪದರ ಉದುರಿದ್ದು, ವಿದ್ಯಾರ್ಥಿಗಳು ಭಯಭೀತರಾಗಿ ಹೊರ ಬಂದಿದ್ದಾರೆ.
ಕಟ್ಟಡವನ್ನು ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಅಡಿಯಲ್ಲಿ 1996ರ ಆ.15ರಂದು ನಿರ್ಮಿಸಲಾಗಿದ್ದು, ಅಂದಿನ ಜವಳಿ ಖಾತೆ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಎಸ್.ಪಾಟೀಲ್ ಅವರು ಈ ಕಟ್ಟಡದ ಉದ್ಘಾಟನಾ ಕಾರ್ಯವನ್ನು ನೆರವೇರಿಸಿದ್ದರು.
ಸುಮಾರು 30 ವರ್ಷಗಳ ಹಳೆಯ ಕಟ್ಟಡ ಇದಾಗಿದ್ದು, ಕೆಲವು ವರ್ಷಗಳಿಂದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿತ್ತು. ಈ ಕುರಿತು ಕಾಲೇಜಿನ ಪ್ರಾಚಾರ್ಯರು ಹಲವು ಬಾರಿ ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿಗಳು ಹಾಗೂ ಶಾಸಕರಿಗೆ, ಸಚಿವರಿಗೆ ಹೊಸ ಕಟ್ಟಡ ನಿರ್ಮಾಣ ಮಾಡುವ ಕುರಿತು ಪ್ರಸ್ತಾವನೆಯನ್ನು ಕಳಿಸುತ್ತಾ ಬಂದಿದ್ದು, ಆದರೆ ಈವರೆಗೂ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿಲ್ಲ.
ಇದೇ ಕಟ್ಟಡದ ಹಿಂಬದಿಯಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಆದರೆ ಹಳೆಯ ಕಟ್ಟಡಗಳು ತೀರ ದುರಸ್ತಿಗೆ ಬಂದಿದ್ದು, ಎಲ್ಲಾ ಕೊಠಡಿಗಳಲ್ಲಿಯೂ ಛತ್ತಿನ ಪದರಗಳು ಈಗೋ ಆಗಲೋ ಬೀಳುವಂತ ಸ್ಥಿತಿಯಲ್ಲಿವೆ. ಪ್ರಾಧ್ಯಾಪಕರು ಪಾಠದ ಕಡೆಗೆ ಗಮನಹರಿಸುವುದಕ್ಕಿಂತ ತಲೆಯ ಮೇಲೆ ಯಾವ ಸಂದರ್ಭದಲ್ಲಿ ಛತ್ತು ಬೀಳುತ್ತದೆಯೋ ಎಂಬ ಭಯದಲ್ಲಿ ಪಾಠ ಕೇಳುವುದು ಮತ್ತು ಉಪನ್ಯಾಸ ನೀಡುವಂತಾಗಿದೆ.
ಈಗಲಾದರೂ ಜನಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಹೊಸ ಕಟ್ಟಡ ಮಂಜೂರು ಮಾಡುವರೇ ಎಂಬುವುದನ್ನು ಕಾದು ನೋಡಬೇಕಾಗಿದೆ.
ಸ್ಥಳಕ್ಕೆ ತಹಸೀಲ್ದಾರ್ ಭೇಟಿ : ಕಟ್ಟಡದ ಮೇಲ್ಛಾವಣಿ ಉದುರಿ ಬಿದ್ದ ಘಟನೆ ಮಾಹಿತಿ ಪಡೆದ ತಹಶೀಲ್ದಾರ್ ಸುರೇಶ ವರ್ಮಾ ಕಾಲೇಜಿಗೆ ಭೇಟಿ ನೀಡಿ ತರಗತಿಗಳ ಕೊಠಡಿ ಪರಿಶೀಲನೆ ನಡೆಸಿದರು. ಈ ಕುರಿತಂತೆ ವರದಿ ಸಲ್ಲಿಸುವಂತೆ ಸ್ಥಳದಲ್ಲಿದ್ದ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದೇವದುರ್ಗ | ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ
ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಧಿಡೀರ್ ಪ್ರತಿಭಟನೆ: ತರಗತಿಯಲ್ಲಿ ಛತ್ತು ಉದುರಿ ನಡೆದ ಅಪಘಾತವನ್ನು ಖಂಡಿಸಿ, ಕಾಲೇಜು ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆಯ ವಿರುದ್ಧ ಧಿಡೀರ್ ಪ್ರತಿಭಟನೆ ನಡೆಸಿದರು. ಹೊಸ ಕೊಠಡಿಗಳ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.




