ಕಮಲಾಪುರ ತಾಲೂಕಿನ ಕಳ್ಕೊಳ್ಳಿ ಗ್ರಾಮದಲ್ಲಿ ಜಮೀನು ವಿವಾದ ಹಿನ್ನೆಯಲ್ಲಿ ದಲಿತ ರೈತನ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಜಾತಿ ನಿಂದನೆ ನಡೆಸಿದರೆಂದು, ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ 12 ಮಂದಿಯ ವಿರುದ್ಧ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಸೇರಿದಂತೆ ವಿವಿಧ ಗಂಭೀರ ಆರೋಪಗಳಡಿ ಪ್ರಕರಣ ದಾಖಲಾಗಿದೆ.
ಕಳ್ಕೊಳ್ಳಿ ಗ್ರಾಮದ ನಿವಾಸಿ ಪ್ರಕಾಶ್ ಸಿಂಗೆ (48) ನೀಡಿದ ದೂರಿನ ಮೇರೆಗೆ ಸಂಗಪ್ಪ ಗುರುಪಾದಪ್ಪ, ನಿಖಿಲ ರೇವಣಸಿದ್ದಪ್ಪ, ಜಗದೇವಪ್ಪ ಗುರುಪಾದಪ್ಪ, ರೇವಣಸಿದ್ದ ಗುರುಪಾದಪ್ಪ, ಅನಿಲ್ ರೇವಣಸಿದ್ದಪ್ಪ, ಚೇತನ್ ಸಂಗಪ್ಪ, ಸರೋಜನಿ ಸಂಗಪ್ಪ, ಲಕ್ಷ್ಮೀ ರೇವಣಸಿದ್ದಪ್ಪ, ಸಿದ್ದಮ್ಮ ಜಗದೇವಪ್ಪ, ಸುನೀಲ್ ಜಗದೇವಪ್ಪ, ಗುಂಡಮ್ಮ ಹಾಗೂ ಸುಲೇಮಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ದೂರಿನ್ವಯ, ಮಹಾಗಾಂವ ಗ್ರಾಮದ ವ್ಯಾಪ್ತಿಯ ಸರ್ವೇ ನಂ.94/1ರಲ್ಲಿ ಇರುವ ತಮ್ಮ 3 ಎಕರೆ 30 ಗುಂಟೆ ಜಮೀನಿನಲ್ಲಿ ಜುಲೈ 20ರಂದು ತೊಗರಿ ಬಿತ್ತನೆ ಮಾಡಲಾಗಿತ್ತು. ಬಳಿಕ ಮಧ್ಯಾಹ್ನ ಜಮೀನಿಗೆ ತೆರಳಿದಾಗ ಆರೋಪಿಗಳು ಯಾವುದೇ ಅನುಮತಿ ಪಡೆಯದೆ ಹೊಲಕ್ಕೆ ಪ್ರವೇಶಿಸಿ ಅದೇ ಜಾಗದಲ್ಲಿ ಮತ್ತೊಮ್ಮೆ ಬಿತ್ತನೆ ನಡೆಸುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ.
‘ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ಸೂಚಿಸುವ ಪದಗಳನ್ನು ಬಳಸಿ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಕೆಲ ಮಹಿಳೆಯರು ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆಗೆ ಯತ್ನಿಸಿದ್ದು, ಟ್ರ್ಯಾಕ್ಟರ್‌ನ್ನು ತಮ್ಮ ಮೇಲೆ ಹಾಯಿಸುವುದಾಗಿ ಬೆದರಿಕೆ ಹಾಕಿ ಜೀವ ಬೆದರಿಕೆ ಒಡ್ಡಿದ್ದಾರೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಘಟನೆಯ ಕುರಿತು ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳು ಹಾಗೂ ಅಟ್ರಾಸಿಟಿ ಕಾಯ್ದೆಯಡಿ ತನಿಖೆ ಆರಂಭಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಶಖಾಪೂರ ದಲಿತರ ಮೇಲಿನ ಹಲ್ಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅತ್ತೂರು ಶ್ರೀನಿವಾಸಲು, ಪ್ರಕರಣದಲ್ಲಿ ಜಾತಿ ನಿಂದನೆ ಆರೋಪಗಳಿರುವುದರಿಂದ ತನಿಖೆಯನ್ನು ಡಿಸಿಆರ್ (ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ನಾಗರಿಕ ಹಕ್ಕು ಜಾರಿ ಘಟಕ) ವಿಭಾಗಕ್ಕೆ ವರ್ಗಾಯಿಸಲಾಗಿದೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಕಾನೂನು ಪ್ರಕಾರ ದೋಷಾರೋಪಣಾ ಪಟ್ಟಿ (ಚಾರ್ಜ್‌ಶೀಟ್) ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.





