ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ನಿಲೋಗಲ್ ಕ್ರಾಸ್ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರು ದ್ವಿತೀಯ ದರ್ಜೆ ಸಹಾಯಕರೊಬ್ಬರಿಗೆ ಜಾತಿ ನಿಂದನೆ ಮಾಡಿ ಮಾನಸಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಶಿವುಕುಮಾರ್ ಎಂಬ ದ್ವಿತೀಯ ದರ್ಜೆ ಸಹಾಯಕರು ಈ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದು, ಕಳೆದ ನಾಲ್ಕು ವರ್ಷಗಳಿಂದ ತಾವು ನಿರಂತರವಾಗಿ ಅವಮಾನ ಮತ್ತು ಕಿರುಕುಳಕ್ಕೆ ಒಳಗಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
“ನನಗೆ ಶಾಲೆಯಲ್ಲಿ ಕುಳಿತುಕೊಳ್ಳಲು ಸೂಕ್ತ ಆಸನವನ್ನೂ ನೀಡುವುದಿಲ್ಲ. ನಾನು ಕುಳಿತುಕೊಳ್ಳುವ ಕುರ್ಚಿಯನ್ನು ವಿದ್ಯಾರ್ಥಿಗಳಿಂದ ತೊಳೆಸಲಾಗುತ್ತದೆ. ಬಳಿಕ ಅದನ್ನು ಕಂಪ್ಯೂಟರ್ ಕೊಠಡಿಯಲ್ಲಿ ಇಡಲಾಗುತ್ತದೆ. ಶಾಲೆಯಲ್ಲಿ ನನಗೆ ಯಾವುದೇ ಗೌರವ ಅಥವಾ ಸ್ಥಾನಮಾನ ನೀಡದೆ, ಪ್ರತಿದಿನ ಅವಹೇಳನಕಾರಿ ಹಾಗೂ ನೋವುಂಟು ಮಾಡುವ ರೀತಿಯಲ್ಲಿ ಮಾತನಾಡಲಾಗುತ್ತಿದೆ,” ಎಂದು ಅವರು ಆರೋಪಿಸಿದ್ದಾರೆ.
ಅನುಕಂಪ ಆಧಾರದ ಮೇಲೆ ನಾಲ್ಕು ವರ್ಷಗಳ ಹಿಂದೆ ಸೇವೆಗೆ ಸೇರಿದ ದಿನದಿಂದಲೇ ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹಲವು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಇದಲ್ಲದೆ, “ನೀನು ಸಂಘ-ಸಂಸ್ಥೆಗಳಿಗೆ ದೂರು ನೀಡಿದರೆ, ನಿನ್ನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡುತ್ತೇನೆ. ನಿನ್ನ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮುಖ್ಯೋಪಾಧ್ಯಾಯರು ಬೆದರಿಕೆ ಹಾಕಿದ್ದಾರೆ,” ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಸಂಬಂಧಿತ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಲಾಗಿದ್ದು, ದೂರು ಸ್ವೀಕರಿಸಿರುವ ಶಿಕ್ಷಣ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಪ್ರಕರಣದ ಕುರಿತು ಪರಿಶೀಲನೆ ನಡೆಸಿ, ವಾಸ್ತವಾಂಶಗಳ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ನೆಟ್ವರ್ಕ್ ಸಮಸ್ಯೆ: ಬೆಟ್ಟದ ಮೇಲೆ ಕುಳಿತು ಎಸ್ಐಆರ್ ಮಾಹಿತಿ ಅಪ್‌ಲೋಡ್
ಆರೋಪಗಳಿಗೆ ಸಂಬಂಧಿಸಿದಂತೆ ಮುಖ್ಯೋಪಾಧ್ಯಾಯರ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.




