ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ದೇಶಪೂರ್ವಕವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಳ್ಳುತ್ತಿರುವುದನ್ನು ಖಂಡಿಸಿ ಹಿಂದುಳಿದ ವರ್ಗಗಳ ಒಕ್ಕೂಟ ಹಾಗೂ ಕರ್ನಾಟಕ ಪ್ರದೇಶ ಕುರುಬ ಸಂಘ ಜಿಲ್ಲಾ ಘಟಕದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಲ್ಲಿ ಸತತವಾಗಿ ಪಕ್ಷ ಸಂಘಟನೆ ಮತ್ತು ಅಧಿಕಾರವಧಿಯಲ್ಲಿ ಉತ್ತಮ ಆಡಳಿತವನ್ನು ನೀಡುತ್ತಾ ಬಂದಿದ್ದಾರೆ. ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಹಿಂದುಳಿದ ವರ್ಗಗಳ ನಾಯಕರಾಗಿರುವ ಸಿದ್ದರಾಮಯ್ಯ ಅವರು ಎಲ್ಲಾ ಸಮುದಾಯಗಳಿಗೆ ನ್ಯಾಯಯುತವಾದ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಇದೀಗ ಕಾಂಗ್ರೆಸ್ ಪಕ್ಷವು ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಪಡೆದುಕೊಳ್ಳುತ್ತಿದ್ದು, ಇದೂ ಒಂದು ಸಮುದಾಯ ಮಾತ್ರವಲ್ಲದೇ ಇಡೀ ಹಿಂದುಳಿದ ಜನಾಂಗಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಸ್ಥಿರವಾಗಿ ಮತ್ತು ನಿರಂತರ ಅಸ್ತಿತ್ವದಲ್ಲಿರಲು ಸಿದ್ದರಾಮಯ್ಯ ಅವರ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಕೂಡಲೇ ಸಿದ್ದರಾಮಯ್ಯ ಅವರನ್ನೇ ಮುಂದಿನ 2 ವರ್ಷಗಳ ಕಾಲ ಮುಖ್ಯಮಂತ್ರಿಯನ್ನಾಗಿ ನೋಡುವುದು ಇಡೀ ರಾಜ್ಯದ ಜನರ ಆಶಯವಾಗಿದೆ ಎಂದರು.
ಪ್ರತಿಭಟನೆ ನಂತರ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅಂಬೇಡ್ಕರ್, ಸಂವಿಧಾನ ಹಾಗೂ ಸಿದ್ದರಾಮಯ್ಯ ಪರ ಘೋಷಣೆಗಳನ್ನು ಹಾಕಿದರು.
ಈ ಸುದ್ದಿ ಓದಿದ್ದೀರಾ? ʼಜಿಲ್ಲಾ ಉಸ್ತುವಾರಿʼ ಜಿಲ್ಲೆಯ ನಾಯಕರಿಗೇ ಇರಲಿ: ರಾಯಚೂರಿಗರ ಒತ್ತಾಯ
ಪ್ರತಿಭಟನೆಯಲ್ಲಿ ಪ್ರಮುಖರಾದ ಕೊಂಡಪ್ಪ, ಬಸವಂತಪ್ಪ, ನಾಗೇಂದ್ರಪ್ಪ ಮಟಮಾರಿ, ಈಶಪ್ಪ, ಹನುಮಂತಪ್ಪ ಜಾಲಿಬೆಂಚಿ, ಸಂಗಮೇಶ ಭಂಡಾರಿ, ನಾಗರಾಜ, ಜಯರಾಜ್, ಶ್ರೀನಿವಾಸ, ಬಾಭು, ಶಂಕರ್, ರಾಮನಗೌಡ, ರಂಚಿತ್, ರಂಗಾರೆಡ್ಡಿ, ಶೇಖರ್ ವಾರದ್, ನರಸಿಂಹಲು, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಮಲ್ಲಿಕಾರ್ಜುನ ಏಗನೂರು, ಯಂಕನಗೌಡ ಸೇರಿದಂತೆ ಅನೇಕರಿದ್ದರು.




