ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರಸ್ತಾಪಕ್ಕೆ ಹೈಕೋರ್ಟ್ ತಡೆಯಾಜ್ಞೆ ಬೆನ್ನಲ್ಲೇ, ಕೆಪಿಸಿಎಲ್ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದೆ. ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಯನ್ನು ಸುಮಾರು ಶೇ. 30ರಷ್ಟು ಕಡಿಮೆ ಮಾಡಿ 96.33 ಎಕರೆಗಳಿಗೆ ಇಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಕಡಿಯಲು ಪ್ರಸ್ತಾಪಿಸಲಾದ ಒಟ್ಟು ಮರಗಳ ಸಂಖ್ಯೆಯನ್ನು 16,041ರಿಂದ 6,377ಕ್ಕೆ ತಗ್ಗಿಸಲಾಗಿದೆ. ಈ ಹಿಂದೆ ಸಲ್ಲಿಸಲಾಗಿದ್ದ ವನ್ಯಜೀವಿ ಸಂಘರ್ಷ ಕುರಿತ ಕಾಳಜಿಯನ್ನು ಗಮನದಲ್ಲಿರಿಸಿ, ಯೋಜನೆಯನ್ನು ಮರುಪರಿಷ್ಕರಿಸಲಾಗಿದೆ ಎಂದು ಕೆಪಿಸಿಎಲ್ ಹೇಳಿದೆ.
ಶರಾವತಿ ಕಣಿವೆಯ ಸಿಂಹ ಬಾಲದ ಸಿಂಗಳೀಕ (ಲಯನ್ ಟೈಲ್ಡ್ ಮಕಾಕ್) ಅಭಯಾರಣ್ಯದಲ್ಲಿ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್), ತನ್ನ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಈ ಹಿಂದೆ 131.81 ಎಕರೆ ಅರಣ್ಯ ಭೂಮಿ ಕೋರಿತ್ತು. ಈ ಯೋಜನೆಯಿಂದ 2000 ಮೆಗವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿಯಿದೆ ಎಂದು ಕೆಪಿಸಿಎಲ್ ತಿಳಿಸಿತ್ತು. ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸದಸ್ಯರ ನೇತೃತ್ವದ ತಜ್ಞರ ಜಂಟಿ ಸಮಿತಿಯು ಈ ಯೋಜನೆ ಅನುಮೋದನೆಗೆ ಒಳಪಡುವ ಅರ್ಹತೆ ಹೊಂದಿರದ ಕಾರಣ ತಿರಸ್ಕರಿಸಬೇಕು ಎಂದು ಆಗ್ರಹಿಸಿತ್ತು.
ಸೆಪ್ಟೆಂಬರ್ 2025ರಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಮಯದಲ್ಲಿ 30,000ಕ್ಕೂ ಹೆಚ್ಚು ಜನರು ಯೋಜನೆಯನ್ನು ವಿರೋಧಿಸಿದ್ದರು. ಐದು ವರ್ಷಗಳ ಹಿಂದೆ ಅಧಿಕಾರಿಗಳು ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಿದಾಗಿನಿಂದಲೇ ಈ ಯೋಜನೆಯು ಹಲವು ಅಡೆತಡೆಗಳನ್ನು ಎದುರಿಸುತ್ತಿದೆ. ಇತ್ತೀಚೆಗೆ ಹೈಕೋರ್ಟ್ ಯೋಜನೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಪ್ರಸ್ತುತ ಮಧ್ಯಂತರ ತಡೆಯಾಜ್ಞೆ ಜಾರಿಯಲ್ಲಿದ್ದು, ಕೆಪಿಸಿಎಲ್ ಹೊಸ ಪ್ರಸ್ತಾವನೆ ಸಲ್ಲಿಸಿದ ನಂತರವೂ ನ್ಯಾಯಾಲಯ ತಡೆಯಾಜ್ಞೆಯನ್ನು ಮುಂದುವರಿಸಬಹುದು ಅಥವಾ ಪರಿಸ್ಥಿತಿ ನೋಡಿ ಬದಲಾಯಿಸಬಹುದು. ಈ ಹಿಂದೆ ತಜ್ಞರ ಜಂಟಿ ಸಮಿತಿ ಯೋಜನೆಯನ್ನು ತಿರಸ್ಕರಿಸಬೇಕು ಎಂದು ಹೇಳಿತ್ತು. ಯೋಜನೆಗೆ ಬಳಕೆಯಾಗುವ ಭೂಮಿ ಮತ್ತು ನಾಶವಾಗುವ ಮರಗಳ ಸಂಖ್ಯೆ ಇಳಿಸಿ, ಪರಿಸರ ಹಾನಿ, ವನ್ಯ ಸಂಕುಲ ನಾಶದ ಪ್ರಮಾಣವನ್ನು ತಗ್ಗಿಸುವ ಕ್ರಮ ಅನುಸರಿಸುತ್ತೇವೆ ಎಂಬ ಕೆಪಿಸಿಎಲ್ ಸಲ್ಲಿಕೆಯೆ ಹೊಸ ಪ್ರಸ್ತಾವನೆಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ಪುನಃ ಪರಿಶೀಲನೆಗೆ ಕೈಗೆತ್ತಿಕೊಂಡ ನಂತರವಷ್ಟೇ ನಿಶ್ಚಿತತೆ ದೊರೆಯಲಿದೆ.





