ಜಾರ್ಖಂಡ್‌ನಲ್ಲಿ ರಾಜ್ಯ ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳನ್ನು ಖಂಡಿಸಿ ಕಳೆದೆರಡು ವಾರಗಳಿಂದ ಮುಷ್ಕರ ನಡೆಸುತ್ತಿರುವ ಯುವಜನರು ಹಾಗೂ ವಿದ್ಯಾರ್ಥಿ ನಾಯಕರ ಜೊತೆ ಜಾರ್ಖಂಡ್ ಸರ್ಕಾರ ಕೊನೆಗೂ ಮೊದಲ ಸುತ್ತಿನ ಅಧಿಕೃತ ಮಾತುಕತೆ ನಡೆಸಿದೆ. ರಾಂಚಿಯ ಸ್ಟೇಟ್ ಗೇಸ್ಟ್ ಹೌಸ್‌ನಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಆಲಿಸಿರುವ ಸರ್ಕಾರದ ಸಚಿವರ ನಿಯೋಗ, ಮುಂದಿನ ತೀರ್ಮಾನ ಕೈಗೊಳ್ಳಲು ಕಾಲಾವಕಾಶ ಕೋರಿದೆ.
ಉನ್ನತ ಶಿಕ್ಷಣ ಸಚಿವ ಸುದಿವ್ಯ ಕುಮಾರ್, ಸಚಿವರಾದ ದೀಪಿಕಾ ಪಾಂಡೆ ಸಿಂಗ್, ಚಮ್ರಾ ಲಿಂಡಾ, ಸಂಜಯ್ ಪ್ರಸಾದ್ ಯಾದವ್ ಹಾಗೂ ಅಭಿವೃದ್ಧಿ ಆಯುಕ್ತ ಅಜಯ್ ಕುಮಾರ್ ಸಿಂಗ್ ಅವರನ್ನೊಳಗೊಂಡ ಸರ್ಕಾರದ ಐವರು ಸದಸ್ಯರ ಸಮಿತಿಯು ‘ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಸುಧಾರಣಾ ಮಂಚ್’ನ 10 ಸದಸ್ಯರ ವಿದ್ಯಾರ್ಥಿ ನಿಯೋಗದೊಂದಿಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದೆ.
ಇದನ್ನೂ ಓದಿ: ಜಾರ್ಖಂಡ್ ಸರ್ಕಾರದೊಂದಿಗೆ ಮಾತುಕತೆಗೆ ಒಪ್ಪಿದ ವಿದ್ಯಾರ್ಥಿಗಳು: 8 ಸದಸ್ಯರ ನಿಯೋಗ ರಚನೆ
ಯುವಜನರ ಮುಖ್ಯ ಬೇಡಿಕೆಗಳು:
ಅಕ್ರಮದ ಆರೋಪಕ್ಕೆ ಒಳಗಾಗಿರುವ 14ನೇ ಜಾರ್ಖಂಡ್ ಲೋಕಸೇವಾ ಆಯೋಗದ (JPSC) ನಾಗರಿಕ ಸೇವಾ ಪರೀಕ್ಷೆಯನ್ನು ತಕ್ಷಣವೇ ರದ್ದುಗೊಳಿಸಬೇಕು. ಪರೀಕ್ಷಾ ಪೇಪರ್ ಸೋರಿಕೆ ಹಾಗೂ ಭ್ರಷ್ಟಾಚಾರದ ಕುರಿತು ಕೇಂದ್ರೀಯ ತನಿಖಾ ದಳ (CBI) ಅಥವಾ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಯಬೇಕು. ಜೆಪಿಎಸ್‌ಸಿ ಹಾಗೂ ಜೆಎಸ್‌ಎಸ್‌ಸಿ (JSSC) ನೇಮಕಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸಮಗ್ರ ಸುಧಾರಣೆಗಳನ್ನು ಜಾರಿಗೆ ತರಬೇಕು ಎಂಬುದು ಯುವಜನರ ಪ್ರಮುಖ ಬೇಡಿಕೆಯಾಗಿದೆ.
ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಸುದಿವ್ಯ ಕುಮಾರ್, “ವಿದ್ಯಾರ್ಥಿಗಳ ಎಲ್ಲಾ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಆಲಿಸಲಾಗಿದೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಯುವಜನರ ಕಾಳಜಿಗೆ ಸೂಕ್ತವಾಗಿ ಸ್ಪಂದಿಸಲು ಬದ್ಧರಾಗಿದ್ದಾರೆ. ವಿದ್ಯಾರ್ಥಿ ನಿಯೋಗ ಮಂಡಿಸಿರುವ ವಿಷಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಸೂಕ್ತ ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮದ ಬಗ್ಗೆ ಸರ್ಕಾರ ತೀರ್ಮಾನ ತಳೆಯಲಿದೆ” ಎಂದು ತಿಳಿಸಿದರು.
ಸರ್ಕಾರದೊಂದಿಗಿನ ಮಾತುಕತೆ ಸೌಹಾರ್ದಯುತವಾಗಿದ್ದರೂ, ಯಾವುದೇ ಬೇಡಿಕೆ ಈಡೇರಿಕೆಗೆ ಸರ್ಕಾರ ಲಿಖಿತ ಭರವಸೆ ನೀಡದ ಹಿನ್ನೆಲೆಯಲ್ಲಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ವಿದ್ಯಾರ್ಥಿ ನಾಯಕ ರವೀಂದ್ರ ಪಾಸ್ವಾನ್ ಸ್ಪಷ್ಟಪಡಿಸಿದ್ದಾರೆ.
ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಹಾಗೂ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಯುವಜನರು ಘೋಷಿಸಿದ್ದಾರೆ. ಸರ್ಕಾರವು ತಕ್ಷಣವೇ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಆಗಸ್ಟ್ 10ರಂದು ವಿಧಾನಸಭಾ ಚಲೋ ನಡೆಸುವುದು ಖಚಿತ ಎಂದು ಪ್ರತಿಭಟನಾ ನಿರತ ಯುವಕರು ಎಚ್ಚರಿಕೆ ನೀಡಿದ್ದಾರೆ.




