ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ 2 ದಿನಗಳಿಂದ ಮಳೆ ಚುರುಕಾಗಿರುವ ಕಾರಣ ತುಂಗಾ ಮೈದುಂಬಿ ಹರಿಯುತ್ತಿದ್ದು, ಜಲಾಶಯದ ನೀರಿನ ಮಟ್ಟವೂ ಏರಿಕೆ ಕಂಡಿದೆ. ಮಲೆನಾಡು ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ವಿಳಂಬವಾದ ಪರಿಣಾಮ ನೀರಿನ ಮೂಲಗಳು ಸಂಪೂರ್ಣ ಬರಿದಾಗಿದ್ದವು. ಸದ್ಯ ಜಲಾಶಯವು 588.24 ಮೀಟರ್ ಗರಿಷ್ಠ ಮಟ್ಟ ಮುಟ್ಟಿದೆ.
ಡ್ಯಾಮ್‌ನಿಂದ ನೀರು ಹೊರಕ್ಕೆ ಬಿಡಲಾಗುತ್ತಿದ್ದು, ಸದ್ಯದ ಒಳ ಹರಿವು 17,785 ಕ್ಯೂಸೆಕ್ ಇದೆ. 8 ಕ್ರೆಸ್ಟ್ ಗೇಟ್‌ಗಳ ಮೂಲಕ ತುಂಗಭದ್ರಾ ಜಲಾಶಯಕ್ಕೆ 13,500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಜಲಾಶಯದ ಹೊರ ಹರಿವು ಹೆಚ್ಚಾಗಿರುವ ಕಾರಣ ತುಂಗಾ ನದಿಯ ನೀರಿನ ಮಟ್ಟವೂ ಅಧಿಕವಾಗಿದೆ.
ಮುಂದಿನ ಎರಡು ದಿನಗಳೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನದಿ ಮಟ್ಟ ಏರಿಕೆಯಾಗುತ್ತಿರುವುದರಿಂದ ನದಿ ತೀರದ ನಿವಾಸಿಗಳು, ಮೀನುಗಾರರು ಮತ್ತು ಸಾರ್ವಜನಿಕರು ನದಿಗೆ ಇಳಿಯದಂತೆ ಮತ್ತು ತಗ್ಗು ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.





