ಅಯೋಧ್ಯೆಯಲ್ಲಿ ಬಿಜೆಪಿ ಸರ್ಕಾರದ ಹಗರಣಗಳು ಮತ್ತು ಮೂಲಸೌಕರ್ಯಗಳ ವೈಫಲ್ಯಗಳ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ. ಉತ್ತರ ಪ್ರದೇಶದ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ (ADA) ಕಚೇರಿಯ ಒಳಗಿದ್ದ ಮೆಟ್ಟಿಲುಗಳು (ಆಧುನಿಕ ನಿಚ್ಚಣಿಗೆ) ದಿಢೀರನೆ ಕುಸಿದು ಬಿದ್ದಿದೆ. ಈ ಘಟನೆಯು ಆಡಳಿತಾರೂಢ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಗುಣಮಟ್ಟ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಭಾನುವಾರ ಅಯೋಧ್ಯೆಯ ನಗರಾಭಿವೃದ್ಧಿ ಮತ್ತು ಕಟ್ಟಡ ಅನುಮೋದನೆಗಳನ್ನು ಮೇಲ್ವಿಚಾರಣೆ ಮಾಡುವ ಎಡಿಎ ಕಚೇರಿಯ ಒಳಗಿದ್ದ ಆಧುನಿಕ ಮೆಟ್ಟಿಲುಗಳ ಭಾಗವೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಈ ವೇಳೆ ಸ್ಥಳೀಯ ಬಿಜೆಪಿ ಶಾಸಕ ಮತ್ತು ಅಯೋಧ್ಯೆ ನಗರದ ಮೇಯರ್ ಕಚೇರಿಯಲ್ಲಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಮೆಟ್ಟಿಲು ಕುಸಿಯುವ ಮುನ್ನವೇ ಆ ಪ್ರದೇಶದಲ್ಲಿದ್ದ ಜನರನ್ನು ತೆರವುಗೊಳಿಸಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: ರಾಮಮಂದಿರ ಲೂಟಿ: ಆರೋಪಿಗಳ ಪರ ವಾದಿಸದಿರಲು ಅಯೋಧ್ಯೆಯ ವಕೀಲರ ನಿರ್ಧಾರ
ಈಗಾಗಲೇ ಅಯೋಧ್ಯೆಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಬೃಹತ್ ರಾಮಮಂದಿರ ದೇಣಿಗೆ ಹಗರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೀಗ ನಿರ್ಮಾಣ ಕಾರ್ಯದಲ್ಲಿ ನಡೆದಿರುವ ಭ್ರಷ್ಟಾಚಾರವು, ಕಳಪೆ ಗುಣಮಟ್ಟದ ನಿರ್ಮಾಣವೂ ಬೆಳಕಿಗೆ ಬರುತ್ತಿದೆ.
ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ (ADA) ಕಚೇರಿಯ ಒಳಗಿದ್ದ ಈ ಆಧುನಿಕ ಮೆಟ್ಟಿಲುಗಳನ್ನು ನಿರ್ಮಿಸಿದ್ದು ಕೇವಲ 2 ವರ್ಷಗಳ ಹಿಂದೆ, ಅಂದರೆ 2024 ರಲ್ಲಿ. ಈ ಕಚೇರಿ ಕಟ್ಟಡವು ಹಳೆಯದಾಗಿದ್ದರೂ, ಇದರ ಒಳಗಿದ್ದ ಕಾಂಕ್ರೀಟ್ ರಹಿತ, ಕಬ್ಬಿಣ ಮತ್ತು ಆಧುನಿಕ ಶೈಲಿಯ ಈ ಇಂಟೀರಿಯರ್ ಮೆಟ್ಟಿಲುಗಳನ್ನು ಇತ್ತೀಚೆಗಷ್ಟೇ ಅಂದರೆ 2024 ರಲ್ಲಿ ಅಯೋಧ್ಯೆಯ ನಗರಾಭಿವೃದ್ಧಿ ನವೀಕರಣ ಯೋಜನೆಯ ಭಾಗವಾಗಿ ಹೊಸದಾಗಿ ನಿರ್ಮಿಸಲಾಗಿತ್ತು.
ರಾಮಮಂದಿರ ದೇಣಿಗೆ ಹಗರಣ
ಈಗಾಗಲೇ ರಾಮಮಂದಿರ ದೇಣಿಗೆ ಹಗರಣ ವಿಚಾರದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇಣಿಗೆ ಎಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಪ್ರತಿದಿನ ಅಂದಾಜು 6 ರಿಂದ 8 ಲಕ್ಷ ರೂಪಾಯಿಗಳಷ್ಟು ದೇಣಿಗೆ ಹಣವನ್ನು ಲೂಟಿ ಮಾಡುತ್ತಿದ್ದರು ಎಂಬ ಅಂಶವನ್ನು ವಿಶೇಷ ತನಿಖಾ ತಂಡ (SIT) ಪತ್ತೆಹಚ್ಚಿದೆ. ಕೇವಲ 14,000 ದಿಂದ 15,000 ರೂ. ಮಾಸಿಕ ಸಂಬಳ ಪಡೆಯುತ್ತಿದ್ದ ಆರೋಪಿಗಳು ಐಷಾರಾಮಿ ಬಂಗಲೆ ಹಾಗೂ ಎಸ್‌ಯುವಿ (SUV) ಕಾರುಗಳನ್ನು ಖರೀದಿಸಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ.




