ಧಾರವಾಡದ ಕಿಟೆಲ್ ಕಾಲೇಜಿನ ಬಿಎಸ್‌ಸಿ ನಾಲ್ಕನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕ ಪೊಲೀಸರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗಂಭೀರ ಆರೋಪ ವ್ಯಕ್ತವಾಗುತ್ತಿದೆ.
ಪೊಲೀಸರು ಗಾಂಜಾ ಪ್ರಕರಣದಲ್ಲಿ ಆದಿತ್ಯ ಮ್ಯಾಗೇರಿ(20)ಯನ್ನು ವಿಚಾರಣೆ ಮಾಡಿ, ಲಂಚ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಗಿರಿನಗರದ(ಪೃಥ್ವಿ ಗಾರ್ಡನ್ ಸಮೀಪ) ಮನೆಯ ಕೋಣೆಯೊಳಗೆ ಸೋಮವಾರ ರಾತ್ರಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
“ಅವನು ಯಾವುದೇ ತಪ್ಪು ಮಾಡಿಲ್ಲ. ಅವನು ನಿರಪರಾಧಿ. ಅವನು ಶನಿವಾರ ಸ್ನೇಹಿತರೊಂದಿಗೆ ಹೊರಗೆ ಹೋಗಿದ್ದ. ಗಾಂಜಾ ಸೇವನೆ ವಿಚಾರಣೆಗೆ ಪೊಲೀಸರು ಅವನನ್ನೂ ಕರೆದೊಯ್ದಿದ್ದಾರೆ. ಅವನನ್ನು ಎಳೆದೊಯ್ದಿರುವುದು ನಮಗೆ ಗೊತ್ತಿರಲಿಲ್ಲ. ಎರಡು ದಿನ ಅವನ ಫೋನ್ ಸ್ವಿಚ್ ಆಫ್ ಆಗಿತ್ತು. ಆದಿತ್ಯ ಗಾಂಜಾ ಸೇವನೆ ಮಾಡಿಲ್ಲ ಎಂದು ಪೊಲೀರಿಗೆ ಗೊತ್ತಾಗಿದೆ. ಬಳಿಕ ಅವನನ್ನು ಬಿಟ್ಟಿದ್ದಾರೆ. ಅವನು ಭಾನುವಾರ ಮನೆಗೆ ಬಂದಿದ್ದ. ʼಹಣ ಕೊಡುವಂತೆ ಪೊಲೀಸರು ಕೇಳಿದ್ದಾರೆ, ಎರಡು ಸಾವಿರ ಹಣ ಕೊಡುʼ ಎಂದಿದ್ದ. ʼಹಣ ಕೊಡದಿದ್ದರೆ ಯಾವುದಾದರೂ ಕೇಸಲ್ಲಿ ಒಳಗೆ ಹಾಕುತ್ತೇವೆʼ ಎಂದಿದ್ದರಂತೆ. ನನ್ನ ಬಳಿ ಹಣವಿರದ ಕಾರಣ, ಬೆಳಿಗ್ಗೆ ಕೊಡುತ್ತೇನೆಂದು ಅವನಿಗೆ ಹೇಳಿದ್ದೆ. ಆದರೆ ಸೋಮವಾರ ರಾತ್ರಿ 10.30ರ ಸುಮಾರಿಗೆ ಅವನು ರೂಮಿನೊಳಗೆ ಹೋಗಿ ಬಾಗಿಲು ಹಾಕಿಕೊಂಡು ಹೀಗೆ ಮಾಡಿಕೊಂಡಿದ್ದಾನೆ….. ನನ್ನ ಮಗ ಮಾಡದ ತಪ್ಪಿಗೆ ಪೊಲೀಸರ ಕಿರುಕುಳಕ್ಕೆ ಬಲಿಯಾಗಿದ್ದಾನೆ” ಎಂದು ಕಣ್ಣೀರಿಟ್ಟಿದ್ದಾರೆ.
ಮೃತ ಯುವಕನ ತಾಯಿ ಹಾಸ್ಟೆಲ್ ಸಹಾಯಕಿಯಾಗಿ ಕೆಲಸ ಮಾಡುತ್ತಾರೆ. ಜತೆಗೆ ಮನೆಗಳಲ್ಲಿ ಅಡುಗೆ ಕೆಲಸ ಮಾಡುತ್ತಾರೆ. ಇವರು ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಬಂದಿದ್ದು, ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದರು” ಎಂದು ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿದ್ದೀರಾ? ಶಿರಸಿ | ಹೆದ್ದಾರಿಯೋ ಅಥವಾ ಕೆಸರು ಗದ್ದೆಯೋ? ಶಿರಸಿ–ಹಾವೇರಿ ರಸ್ತೆಯ ದುಸ್ಥಿತಿಗೆ ಸಾರ್ವಜನಿಕರ ಆಕ್ರೋಶ
“ವಿದ್ಯಾಗಿರಿ ಪೊಲೀಸ್ ಠಾಣೆಯ ಸಿಬ್ಬಂದಿ ಶನಿವಾರ ಮಾದಕವಸ್ತು ವಿರೋಧಿ ಅಭಿಯಾನದ ಭಾಗವಾಗಿ 18 ಮಂದಿಯನ್ನು ಬಂಧಿಸಿ ಪರೀಕ್ಷೆಗೆ ಒಳಪಡಿಸಿದ್ದರು. ಪರೀಕ್ಷಿಸಲ್ಪಟ್ಟವರಲ್ಲಿ ಆದಿತ್ಯನೂ ಇದ್ದನು. ಆತನು ಮನೆಗೆ ಮರಳಲು ಅನುಮತಿಸುವ ಮೊದಲು ನಡೆಸಿದ ಪರೀಕ್ಷೆಯಲ್ಲಿ ಆತ ಗಾಂಜಾ ಸೇವಿಸಿರುವುದು ಕಂಡುಬಂದಿಲ್ಲ. ಹಾಗಾಗಿ ಅವರನ್ನು ಮನೆಗೆ ಕಳಿಸಿದ್ದರು. ಲಂಚ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಡಿಸಿಪಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇನೆ. ಸಮಿತಿ ವರದಿ ಆಧರಿಸಿ ಕ್ರಮ ವಹಿಸುತ್ತೇನೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





