ಸಿದ್ದಾಪುರ: ವಿಶ್ವವಿಖ್ಯಾತ ಜೋಗ ರಾಜ ಜಲಪಾತದಿಂದ ನೀರು ಬಿಳುವಲ್ಲಿ ರಿಲ್ಸ್ ಹಾಗೆ ಪೋಟೋ ಸಲುವಾಗಿ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಹಲಗೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಪಾಯಕಾರಿ ಪ್ರದೇಶಗಳಲ್ಲಿ ಅನಾಹುತಗಳನ್ನು ತಡೆಯಲು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆಲ ಪ್ರವಾಸಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ಉದ್ದೇಶದಿಂದ ಅಪಾಯಕಾರಿ ಸ್ಥಳಗಳಿಗೆ ತೆರಳಿ ರೀಲ್ಸ್ ಹಾಗೂ ವಿಡಿಯೊ ಚಿತ್ರೀಕರಣ ನಡೆಸುತ್ತಿರುವ ಘಟನೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಲು ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ರಾಜ ಜಲಪಾತ ಪ್ರದೇಶದಲ್ಲಿ ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇತ್ತೀಚೆಗೆ ಇದೇ ಪ್ರದೇಶದಲ್ಲಿ ಅಪಾಯಕಾರಿ ಸಾಹಸ ನಡೆಸಿದ ಕೆಲ ಯೂಟ್ಯೂಬರ್‌ಗಳ ವಿರುದ್ಧ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿದ್ದಾರೆ
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಮಳೆಯ ಅಬ್ಬರ: ದೇವಿಮನೆ ಘಟ್ಟದಲ್ಲಿ ಭೂಕುಸಿತ, ಹಾರವಾಡದಲ್ಲಿ ಕಡಲ ಕೊರೆತ ತೀವ್ರ
ಇದರ ಜೊತೆಗೆ, ಜಲಪಾತ ಪ್ರದೇಶದಲ್ಲಿ ಪ್ರವಾಸಿಗರ ಚಲನವಲನದ ಮೇಲೆ ನಿಗಾ ವಹಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆಯನ್ನೂ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ವೇಳೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಪಾಯಕಾರಿ ಸಾಹಸಗಳಿಗೆ ಮುಂದಾಗದೆ ಜವಾಬ್ದಾರಿಯುತವಾಗಿ ವರ್ತಿಸುವ ಮೂಲಕ ಸುರಕ್ಷಿತ ಪ್ರವಾಸೋದ್ಯಮಕ್ಕೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಅವರ ನಿರ್ದೇಶನದಂತೆ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿದ್ದಾಪುರ ಪೊಲೀಸ್ ನಿರೀಕ್ಷಕ ಜೆ.ಬಿ. ಸೀತಾರಾಮ್ ನೇತೃತ್ವದಲ್ಲಿ ಈ ಪರಿಶೀಲನೆ ನಡೆಯಿತು. ಈ ವೇಳೆ ಸಿದ್ದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ಶಾಂತಿನಾಥ್ ಪಾಸನೆ, ಹಲಗೇರಿ ಗ್ರಾಮ ಪಂಚಾಯಿತಿ ಪಿಡಿಒ ನಟರಾಜ್ ಆರ್. ನಾಯ್ಕ ಹಾಗೂ ಆಡಳಿತಾಧಿಕಾರಿ ಸುಮಾ ಉಪಸ್ಥಿತರಿದ್ದರು.




