ಶಿರಸಿ: ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸರ್ಕಾರದ ವತಿಯಿಂದ ಆಯೋಜಿಸಲ್ಪಟ್ಟಿದ್ದ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬಾರದಿರುವುದನ್ನು ಖಂಡಿಸಿ, ಭೀಮಘರ್ಜನೆ ಸಂಘಟನೆ ಹಾಗೂ ದಲಿತ ಮುಖಂಡರು ತಾವೇ ಕಾರ್ಯಕ್ರಮ ಆಚರಿಸಿ ಅಧಿಕಾರಿಗಳ ನಡೆಯನ್ನು ಖಂಡಿಸಿದರು.
ತಾಲ್ಲೂಕು ಆಡಳಿತದ ಆಹ್ವಾನ ಪತ್ರಿಕೆಯ ಪ್ರಕಾರ, ಬೆಳಿಗ್ಗೆ 10 ಗಂಟೆಗೆ ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಬೇಕಿತ್ತು. ಇದರಂತೆ ಭೀಮಘರ್ಜನೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅರ್ಜುನ್ ಮಿಂಟಿ ನೇತೃತ್ವದಲ್ಲಿ ದಲಿತ ಮುಖಂಡರು ಹಾಗೂ ಸಮಾಜದ ಹಿರಿಯರು ಸರಿಯಾದ ಸಮಯಕ್ಕೆ ಹಾಜರಾಗಿದ್ದರು.
ಆದರೆ, ಸುಮಾರು 11:10 ಗಂಟೆಯಾದರೂ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಬೇಕಿದ್ದ ಶಾಸಕ ಭೀಮಣ್ಣ ಟಿ. ನಾಯ್ಕ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರು ಸ್ಥಳಕ್ಕೆ ಆಗಮಿಸಿರಲಿಲ್ಲ.
ಗಂಟೆಗೂ ಹೆಚ್ಚು ಕಾಲ ಕಾದ ಮುಖಂಡರು, ಜನಪ್ರತಿನಿಧಿಗಳ ಈ ಧೋರಣೆಯನ್ನು ರಾಷ್ಟ್ರನಾಯಕರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ದಲಿತ ಮುಖಂಡರೇ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜಯಂತಿ ಆಚರಿಸಿದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಭೀಕರ ರಸ್ತೆ ಅಪಘಾತ: ಸಾರಿಗೆ ಮತ್ತು ಖಾಸಗಿ ಬಸ್‌ಗಳ ನಡುವೆ ಡಿಕ್ಕಿ, 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ನಂತರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ಕಚೇರಿಯಿಂದ ಹೊರನಡೆದರು.ಈ ಸಂದರ್ಭದಲ್ಲಿ ಮಾತನಾಡಿದ ಅರ್ಜುನ್ ಮಿಂಟಿ, “ಪ್ರತಿ ಬಾರಿಯೂ ದಲಿತ ನಾಯಕರಿಗೆ ಹಾಗೂ ಸಂಘಟನೆಗಳಿಗೆ ಇದೇ ರೀತಿ ಅವಮಾನ ಮಾಡಲಾಗುತ್ತಿದೆ. ಸಮಯ ಪ್ರಜ್ಞೆ ಇಲ್ಲದ ಅಧಿಕಾರಿಗಳು ಮತ್ತು ಶಾಸಕರು ದಲಿತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ” ಎಂದು ಕಿಡಿಕಾರಿದರು.
ಹಿರಿಯ ಮುಖಂಡ ಅರವಿಂದ್ ನೇತ್ರೇಕರ್ ಮಾತನಾಡಿ, ದೂರದ ಹಳ್ಳಿಗಳಿಂದ ಬಂದ ಸಮಾಜದ ಜನರನ್ನು ಕಾಯಿಸಿ ಅಧಿಕಾರಿಗಳು ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಭೀಮಘರ್ಜನೆ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಅಮಿತ್ ಜೋಗಳೇಕರ್, ಪ್ರಮುಖರಾದ ರಘು ಕಾನಡೆ, ರಾಜೇಶ್ ದೇಶಭಾಗ್, ವಿನಾಯಕ್ ಸಿ. ನೈಕ್, ಚಂದ್ರಕಾಂತ್ ರೇವಣಕರ್, ಬಸವರಾಜ್ ದೊಡ್ಮನಿ, ವಸಂತ್ ನೇತ್ರೆಕರ್, ಹರೀಶ್ ಪಾಲೇಕರ್, ಕಾಶೀನಾಥ್ ಕಾನಡೆ, ಶುಭಾಷ್ ಮಂಡೂರ್, ದೀಪಕ್ ರೇವಣಕರ್, ಶೈಲೇಶ್ ಗಾಂಧಿ, ನಂದ್ ಕುಮಾರ್ ಜೋಗಳೇಕರ್ ಹಾಗೂ ಮಹಿಳಾ ಮುಖಂಡರು ಉಪಸ್ಥಿತರಿದ್ದರು.




