ನಾವೆಲ್ಲರೂ ಮುಖ್ಯಮಂತ್ರಿ ಅವರ ಕೆಳಗೆ ಕೆಲಸ ಮಾಡುವವರು. ಮೂವರು ಡಿಸಿಎಂ ಬಗ್ಗೆ ಯಾರು ಹೇಳಿಕೆ ನೀಡಿದ್ದಾರೋ ಅವರನ್ನೇ ಕೇಳಿ. ಮುಖ್ಯಮಂತ್ರಿಗಳೇ ಇದಕ್ಕೆ ಉತ್ತರ ಕೊಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಸಚಿವ ಕೆ ರಾಜಣ್ಣ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ನನ್ನನ್ನು ಡಿಸಿಎಂ ಮಾಡಲಾಗಿದೆ. ನಾವೆಲ್ಲ ಅವರ ಕೈ ಕೆಳಗೆ ಕೆಲಸ ಮಾಡುತ್ತಿದ್ದೇವೆ. ಮೂವರು ಡಿಸಿಎಂ ಹುದ್ದೆ ಸೃಷ್ಟಿಯ ಬಗ್ಗೆ ಮಾತನಾಡಿದ್ದು ಸಂತೋಷ. ಅವರ ತಲೆಯಲ್ಲಿ ಏನಿದೆಯೋ ಎಂಬುದರ ಬಗ್ಗೆ ಅವರನ್ನೇ ಕೇಳಿ” ಎಂದರು.
ಹರಿಪ್ರಸಾದ್ ವಿಚಾರದಲ್ಲಿ ಮೌನವಾಗಿದ್ದೀರಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಬಿ ಕೆ ಹರಿಪ್ರಸಾದ್ ಅವರು ವರ್ಕಿಂಗ್ ಕಮಿಟಿ ಮೆಂಬರ್ ಇದ್ದಾರೆ. ಹೈಕಮಾಂಡ್ ಮಾತ್ರ ಅವರನ್ನು ಪ್ರಶ್ನೆ ಮಾಡಲು ಬರುತ್ತದೆ. ನನ್ನ ಲೆವಲ್‌ನಲ್ಲಿ ಯಾರನ್ನು ಪ್ರಶ್ನೆ ಮಾಡಬೇಕೋ ಅವರನ್ನು ಮಾಡುತ್ತೇನೆ. ಇದಕ್ಕೆ ಯಾವ ಮುಲಾಜು ಇಲ್ಲ. ಎಳಸು ತರ ಪ್ರಶ್ನೆ ಕೇಳಬೇಡಿ. ನಮ್ಮಲ್ಲಿ ಇದಕ್ಕೆ ಒಂದು ಕಾನೂನು ಪುಸ್ತಕ ಇದೆ. ಓದಿ ತಿಳಿದುಕೊಳ್ಳಿ” ಎಂದು ಪತ್ರಕರ್ತರನ್ನೇ ತರಾಟೆಗೆ ತೆಗೆದುಕೊಂಡರು.