ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಕುಣಿಗಲ್ ತಾಲ್ಲೂಕಿನ ಬರವೀಕ್ಷಣೆ ಸಂದರ್ಭದಲ್ಲಿ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಅವರಿಗೆ ನಡೆದ ಘೇರಾವ್ ಪೂರ್ವನಿಯೋಜಿತವಾಗಿತ್ತು ಎಂದು ಅವರ ಬೆಂಬಲಿಗರು ಹಾಗೂ ನೀರಾವರಿ ಹೋರಾಟಗಾರರು ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಹೇಮಾವತಿ ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, “ನಮ್ಮ ನೀರು, ನಮ್ಮ ಹಕ್ಕು” ಎಂಬ ನಿಟ್ಟಿನಲ್ಲಿ ಎಂ.ಟಿ. ಕೃಷ್ಣಪ್ಪ ನಡೆಸುತ್ತಿರುವ ಹೋರಾಟ ರೈತರ ಹಿತಕ್ಕಾಗಿ ನಡೆಯುತ್ತಿದೆ. ಆದರೆ ಪೈಪ್‌ಲೈನ್ ಕಾಮಗಾರಿಯ ವಿಚಾರವನ್ನು ಮುಂದಿಟ್ಟುಕೊಂಡು ಕುಣಿಗಲ್ ಶಾಸಕ ರಂಗನಾಥ್ ಅವರು ರೈತರ ನಡುವೆ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, ಕುಣಿಗಲ್‌ಗೆ ಆಗಮಿಸಿದ್ದ ಶಾಸಕ ಎಂ.ಟಿ. ಕೃಷ್ಣಪ್ಪ ಅವರನ್ನು ಶಾಸಕ ರಂಗನಾಥ್ ಟೀಕಿಸಿ, ಪೈಪ್‌ಲೈನ್ ವಿಚಾರವನ್ನು ತಪ್ಪಾಗಿ ಬಿಂಬಿಸುವ ಮೂಲಕ ಕೆಲವರನ್ನು ಪ್ರಚೋದಿಸಿ ಘೇರಾವ್ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ರೈತರ ಹಿತಕ್ಕಾಗಿ ಕೃಷ್ಣಪ್ಪ ಅವರ ಹೋರಾಟ ನಡೆಯುತ್ತಿದೆ. ಕುಣಿಗಲ್‌ಗೆ ಹಂಚಿಕೆಯಾಗಿರುವ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಬಾಕಿ ಇರುವ ನಾಲೆ ಅಗಲೀಕರಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮೊದಲು ಅಲ್ಲಿನ ರೈತರಿಗೆ ನೀರು ಒದಗಿಸಬೇಕು. ಕುಣಿಗಲ್‌ಗೆ ನೀರು ನೀಡುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಪೈಪ್‌ಲೈನ್ ಯೋಜನೆಯ ವಿಚಾರದಲ್ಲಿ ರೈತರ ನಡುವೆ ಸಂಘರ್ಷ ಸೃಷ್ಟಿಸುವ ಬದಲು ಯೋಜನೆಯ ಸಾಧಕ-ಬಾಧಕಗಳ ಕುರಿತು ಸಮಗ್ರ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಬೀರಮಾರನಹಳ್ಳಿ ನರಸೇಗೌಡ ಮಾತನಾಡಿ, ಶಾಸಕ ಎಂ.ಟಿ. ಕೃಷ್ಣಪ್ಪ ಅವರಿಗೆ ಘೇರಾವ್ ಮಾಡಿರುವುದನ್ನು ಖಂಡಿಸಿದರು. ಕುಣಿಗಲ್ ಶಾಸಕ ರಂಗನಾಥ್ ಅವರ ಬೆಂಬಲಿಗರ ಹೇಳಿಕೆಗಳು ಹಾಗೂ ವರ್ತನೆ ಖಂಡನೀಯವಾಗಿದ್ದು, ಎರಡು ತಾಲ್ಲೂಕುಗಳ ನಡುವೆ ವೈಷಮ್ಯ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಹೇಮಾವತಿ ನೀರನ್ನು ತರಲು ಈ ಹಿಂದೆ ವೈ.ಕೆ. ರಾಮಯ್ಯ ಸೇರಿದಂತೆ ಹಲವು ಮುಖಂಡರು ಹೋರಾಟ ನಡೆಸಿದ್ದರು. ಆದರೆ ತಾಲ್ಲೂಕಿನ ಇನ್ನೂ ಎರಡು ಹೋಬಳಿಗಳಿಗೆ ಹೇಮಾವತಿ ನೀರು ತಲುಪಿಲ್ಲ. ಹೀಗಿರುವಾಗ ಜಿಲ್ಲೆಯ ನೀರಿನ ವಿಚಾರದಲ್ಲಿ ಎಲ್ಲ ಶಾಸಕರು, ಮಾಜಿ ಶಾಸಕರು, ರೈತ ಮುಖಂಡರು ಹಾಗೂ ನೀರಾವರಿ ಹೋರಾಟಗಾರರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಶಾಸಕ ಎಂ.ಟಿ. ಕೃಷ್ಣಪ್ಪ ಅವರ ಕುರಿತು ಹಗುರವಾಗಿ ಮಾತನಾಡುವುದು ಅಥವಾ ಅವರ ವಿರುದ್ಧ ಘೇರಾವ್ ನಡೆಸುವುದನ್ನು ಮುಂದುವರಿಸಿದರೆ ಕುಣಿಗಲ್‌ನಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜೆಡಿಎಸ್ ಹೋಬಳಿ ಅಧ್ಯಕ್ಷ ಜಗದೀಶ್ ಮಾತನಾಡಿ, ಉಪಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಓರ್ವ ಶಾಸಕರಿಗೆ ಸೂಕ್ತ ರಕ್ಷಣೆ ದೊರೆಯದಿದ್ದರೆ ಸರ್ಕಾರದ ಆಡಳಿತ ವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಮೂಡುತ್ತವೆ. ಕುಣಿಗಲ್ ಶಾಸಕರು ತಮ್ಮ ಕ್ಷೇತ್ರದ ರೈತರ ಹಿತ ಕಾಪಾಡುವತ್ತ ಗಮನಹರಿಸಬೇಕು. ಅದನ್ನು ಬಿಟ್ಟು ತುರುವೇಕೆರೆ ಶಾಸಕರ ವಿರುದ್ಧ ಘೇರಾವ್ ನಡೆಸುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.
“ನಮ್ಮ ಶಾಸಕರ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ. ತುರುವೇಕೆರೆ ಕ್ಷೇತ್ರಕ್ಕೆ ಬಂದು ಇಲ್ಲಿನ ರೈತರ ಶಕ್ತಿ ಏನೆಂಬುದನ್ನು ಅರಿತುಕೊಳ್ಳಲಿ” ಎಂದು ಜಗದೀಶ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಂಜೇಗೌಡ, ಬೋರಪ್ಪನಹಳ್ಳಿ ಕುಮಾರ್, ವೀರಣ್ಣಗುಡಿ ರಾಮಣ್ಣ, ರವಿಕುಮಾರ್, ಬಾಬಣ್ಣ, ಕೇಶವ್, ನಂದೀಶ್, ಪಾಪಣ್ಣ, ಹರೀಶ್, ಲಕ್ಷ್ಮಿನಾರಾಯಣ (ಅಣ್ಣಿ), ಸೀನಣ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.




