ಮಧುಗಿರಿ ತಾಲೂಕಿನ ಕೊಡಗೆನಹಳ್ಳಿ ಸಮೀಪದ ಸಿಂಗನಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿ ಸುಮಾರು 30 ಕುರಿಗಳನ್ನು ಕಚ್ಚಿ ಕೊಂದಿರುವ ದುರ್ಘಟನೆ ನಡೆದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಕುರಿಗಳು ತೀವ್ರವಾಗಿ ಗಾಯಗೊಂಡಿದ್ದು, ರೈತ ಶನಿವಾರಪ್ಪ ಅವರಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ.
ಶನಿವಾರಪ್ಪ ಅವರಿಗೆ ಸೇರಿದ ಕುರಿಗಳು ಎಂದಿನಂತೆ ರೊಪ್ಪದಲ್ಲಿ (ದೊಡ್ಡಿ) ಕಟ್ಟಿಹಾಕಲಾಗಿದ್ದ ವೇಳೆ ಏಕಾಏಕಿ ಬೀದಿ ನಾಯಿಗಳ ಹಿಂಡು ಒಳನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿದೆ. ನಾಯಿಗಳ ಅಟ್ಟಹಾಸಕ್ಕೆ 30 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. ಗಾಯಗೊಂಡ ಕುರಿಗಳ ಸ್ಥಿತಿಯೂ ಚಿಂತಾಜನಕವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪಶು ವೈದ್ಯಾಧಿಕಾರಿ ಡಾ. ಸೀಮಾ, ಕುರಿ ಸಂಘದ ಜಿಲ್ಲಾಧ್ಯಕ್ಷ ನಾಗರೆಡ್ಡಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಗೊಂಡ ಕುರಿಗಳಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ನಷ್ಟದ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ.
ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಾನುವಾರುಗಳ ರಕ್ಷಣೆಯೇ ಸವಾಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆ ತಕ್ಷಣ ಕ್ರಮ ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
“ಸ್ಥಳ ಪರಿಶೀಲನೆ ನಡೆಸಿ ಬದುಕುಳಿದಿರುವ ಕುರಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಘಟನೆ ಕುರಿತು ಇಲಾಖೆಗೆ ಸಮಗ್ರ ವರದಿ ಸಲ್ಲಿಸಲಾಗುವುದು. ನೊಂದ ರೈತ ಶನಿವಾರಪ್ಪ ಅವರಿಗೆ ಸರ್ಕಾರದಿಂದ ದೊರೆಯಬೇಕಾದ ಸೂಕ್ತ ಪರಿಹಾರವನ್ನು ಶೀಘ್ರದಲ್ಲಿ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು” ಎಂದು ಪಶು ವೈದ್ಯಾಧಿಕಾರಿ ಡಾ. ಸೀಮಾ ಪ್ರತಿಕ್ರಿಸಿದರು




