ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಶಿಬಿರಾರ್ಥಿಗಳಲ್ಲಿ ಆತ್ಮಾವಿಶ್ವಾಸವನ್ನು ತುಂಬಿ, ಉತ್ತಮ ಅಭ್ಯಾಸಗಳನ್ನು ಮೈಗೂಡಿಸಿಕೊಂಡು ಶ್ರೇಷ್ಠ ಚಾರಿತ್ರ್ಯ ನಿರ್ಮಾಣ ಮಾಡುವಲ್ಲಿ ಗಣನೀಯವಾದ ಪಾತ್ರ ನಿರ್ವಹಿಸುತ್ತವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಹೆಚ್.ಎಸ್ ಮೋಹನ್ ಅಭಿಪ್ರಾಯಪಟ್ಟರು.
ಮಧುಗಿರಿ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ವತಿಯಿಂದ ದೊಡ್ಡೇರಿ ಹೋಬಳಿಯ ಬಡಿಗೊಂಡನಹಳ್ಳಿ ಮತ್ತು ಸರ್ಜಮ್ಮನಹಳ್ಳಿಯಲ್ಲಿ ಆಯೋಜಿಸಿರುವ 2025-26ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಂಪ್ರಾದಾಯಿಕ ಪರಂಪರ ಮೌಲ್ಯಗಳನ್ನು, ನೆಲಮೂಲ ಸಂಸ್ಕೃತಿಯನ್ನು ಅಳವಡಿಸಿಕೊಂಡು ದೇಶವನ್ನು ಕಟ್ಟುವ ಪ್ರಾಮಾಣಿಕ ಪ್ರಯತ್ನವನ್ನು ಗ್ರಾಮೀಣ ಪ್ರದೇಶದಲ್ಲಿ ಆಯೋಜನೆ ಗೊಂಡಿರುವ ಶೈಕ್ಷಣಿಕ ಸೇವಾ ಶಿಬಿರಗಳು ಪರಿಣಾಮಕಾರಿಯಾಗಿ ಸಹಾಯಕವಾಗುತ್ತವೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗಭೂಷಣ್ ಬಗ್ಗನಡು ಮಾತನಾಡಿ ಎನ್ ಎಸ್ ಎಸ್ ಶಿಬಿರಗಳು ಕೇವಲ ಭೌತಿಕ ಸ್ವಚ್ಛತೆಯೆಡೆ ಗಮನಹರಿಸದೆ ಬೌದ್ಧಿಕ ಸ್ವಚ್ಛತೆ ಕಡೆಗೂ ಗಮನವನ್ನು ಕೇಂದ್ರಿಕರಿಸಲಿದ್ದು, ಶ್ರಮದ ಮೂಲಕ ಉತ್ಪಾದನೆಯಾಗುವ ಜ್ಞಾನಾರ್ಜನೆಯು ಅಪರಿಮಿತ ಶಕ್ತಿಯನ್ನು ಹೊಂದಿದ್ದು, ಶಿಬಿರಗಳಲ್ಲಿ ಪಡೆದಂತಹ ಜ್ಞಾನವನ್ನು ಜೀವನ ಪರ್ಯಂತ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಕುಮಾರ್ ಕೆ.ಎಸ್, ವಿದ್ಯಾರ್ಥಿಗಳಲ್ಲಿ ಓದಿನ ಜೊತೆಜೊತೆಗೆ ಕಲೆ, ಸಾಹಿತ್ಯ, ಗ್ರಾಮೀಣ ಕ್ರೀಡೆ, ಸಂಗೀತ, ನಾಟ್ಯ, ಬರವಣಿಗೆ , ವೈಚಾರಿಕ ಚಿಂತನೆಗಳು ಇನ್ನೂ ಮುಂತಾದ ಮೌಲ್ಯಯುತ ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ಸಹಾಯಕವಾಗುತ್ತವೆ ಎಂದರು.
ಶಿಬಿರದಲ್ಲಿ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದ ಕಾರ್ಯಕ್ರಮಾಧಿಕಾರಿ ಮಂಜುನಾಥ್.ಬಿ, ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸ ಹಂತದಿಂದಲೇ ನಾಯಕತ್ವ, ನಾಡಪ್ರೇಮ, ಸಹಕಾರ,ಸೌಹಾರ್ದತೆ, ಸಹಬಾಳ್ವೆ, ನಾಗರೀಕ ಪ್ರಜ್ಞೆ ಮೂಡುವಲ್ಲಿ ಎನ್ ಎಸ್ ಎಸ್ ಶಿಬಿರಗಳು ತೀರಾ ಅವಶ್ಯಕವಾಗಿವೆ ಎಂದರು.
ಶಿಬಿರದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸಂಜೀವಮೂರ್ತಿ, ಡಾ.ನಾಗರಾಜು, ಮುರುಳಿಧರ್, ಡಾ.ದುರ್ಗಪ್ಪ, ರಾಮಮೂರ್ತಿ, ಮಂಜುನಾಥ್ ಎಸ್.ವಿ ಮನೋಹರ್, ಅಧೀಕ್ಷಕ ಯೋಗಿಶ್ ಕುಮಾರ್, ಡಾ.ಲಕ್ಷ್ಮೀರಂಗಯ್ಯ, ಮೀನಾಕ್ಷಿ, ಗ್ರಾಮದ ಮುಖಂಡರಾದ ದಿನೇಶ್, ವಸಂತ್, ನಾಗಣ್ಣ, ರಾಜಣ್ಣ, ಶಿಬಿರಾರ್ಥಿಗಳು ಹಾಗೂ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಶಿಬಿರದ ಕಾರ್ಯಕ್ರಮಾಧಿಕಾರಿ ಡಾ.ಮಂಜುನಾಥ್ ಬುಡಸನಹಳ್ಳಿ ಸ್ವಾಗತಿಸಿ, ಡಾ.ಲೀಲಾವತಿ ಪ್ರತಿಜ್ಞಾವಿಧಿ ಬೋಧಿಸಿ, ಮಂಜುನಾಥ್ ಪೂಜೇರಿ ವಂದಿಸಿದರು.




