ವಡಗೇರಾ ತಾಲೂಕಿನ ಯಕ್ಷಿಂತಿ ಗ್ರಾಮದಲ್ಲಿ ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂಯುಕ್ತ ಜಯಂತಿಯನ್ನು ಸೌಹಾರ್ದತೆಯ ಸಂಕಲ್ಪ ದಿನವಾಗಿ ವಿವಿಧ ಸಮಾಜದವರ ಸಹಭಾಗಿತ್ವದಲ್ಲಿ ಭಾನುವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಗ್ರಾಮದ ವಿವಿಧ ಸಮುದಾಯದ ಮುಖಂಡರು, ಮಹಿಳೆಯರು, ಯುವಕರು ಹಾಗೂ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿ ಮಹನೀಯರ ತತ್ವ ಆದರ್ಶಗಳನ್ನು ಸ್ಮರಿಸಿದರು. ಕಾರ್ಯಕ್ರಮಕ್ಕೆ ದುರದುಂಡೇಶ್ವರ ಮಠ, ಕೊಡೇಕಲ್‌ನ ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರತ್ನ ವಿ. ಪಾಟೀಲ್ ವಹಿಸಿದ್ದರು. ಬೆಂಗಳೂರು ಹೈಕೋರ್ಟ್‌ನ ಪ್ರಧಾನ ನ್ಯಾಯವಾದಿ ಮಲ್ಲಿಕಾರ್ಜುನ ಬಸರಡ್ಡಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಹತ್ತಿಗುಡೂರ ಶರಣರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಬುದ್ಧನ ಕರುಣೆ, ಬಸವಣ್ಣನ ಸಮಾನತೆ ಹಾಗೂ ಅಂಬೇಡ್ಕರ್ ಅವರ ಸಂವಿಧಾನ ಮೌಲ್ಯಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶಕವಾಗಿವೆ’ ಎಂದು ಹೇಳಿದರು.

ಕುಮಾರಿ ವಿಶ್ವ ಪೂರ್ವ ಸತ್ಯಂಪೇಟೆ ಅವರು ಭಾರತೀಯ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಬಳಿಕ ಖ್ಯಾತ ನ್ಯಾಯವಾದಿ ಮಲ್ಲಿಕಾರ್ಜುನ ಹಿರೇಮಠ, ಸುರುಪುರದ ಸಂಗಣ್ಣ ವಕೀಲರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ಮಹನೀಯರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಪಿಎಸ್‌ಐ ಐಬಿಖಾನ್, ಮಲ್ಲಯ್ಯಸ್ವಾಮಿ ಹಿರೇಮಠ, ಅಖಂಡಪ್ಪ ಪೂಜಾರಿ, ಮಹಾದೇವಣ್ಣ ಪೂಜಾರಿ, ಗುರುನಾಥರೆಡ್ಡಿ ಚಿಕ್ಕಮೇಟಿ, ದಳಪತಿ ಸಿದ್ರಾಮಪ್ಪಗೌಡ, ಬಸನಗೌಡ ದುಬ್ಬನೊರ್, ಭೀಮನಗೌಡ ಪೊಲೀಸ್ ಪಾಟೀಲ್, ಶರಣಗೌಡ ಮಾಲಿ ಪಾಟೀಲ್, ಮಲ್ಲಣ್ಣ ದೊಡ್ಮನಿ ಕಾವಲಿ, ರಾಕೇಶ್ ಗೌಡ ಕರಡಕಲ್, ವೆಂಕಣ್ಣಗೌಡ ಬಸರೆಡ್ಡಿ, ರಂಗರಾಜಗೌಡ ದೊಡ್ಡಮನಿ, ಮಲ್ಲಿಕಾರ್ಜುನ ಸಾಹುಕಾರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ತಾಲೂಕು ಉಪಾಧ್ಯಕ್ಷರಾದ ಮಲ್ಲಣ್ಣ ದಳವಾಯಿ, ಗ್ರಾಮ ಘಟಕ ಅಧ್ಯಕ್ಷ ದೇವಪ್ಪ ದೊಡ್ಮನಿ, ವಾಲ್ಮೀಕಿ ಸಂಘದ ಅಧ್ಯಕ್ಷ ಹನುಮಂತ ಹಟ್ಟಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮಾಜಿ ಸದಸ್ಯರು, ಗ್ರಾಮಸ್ಥರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಕಾರ್ಯಕ್ರಮವನ್ನು ಸಾಹಿತಿ ಸಿದ್ದಣ್ಣ ಪೂಜಾರಿ ನಿರೂಪಿಸಿದರು. ನಿಂಗಣ್ಣ ಕರಡಿ ಸ್ವಾಗತಿಸಿದರು. ನಾಗರಾಜ ಚಲುವಾದಿ ವಂದಿಸಿದರು. ಕಾರ್ಯಕ್ರಮವು ಸೌಹಾರ್ದತೆ, ಸಮಾನತೆ ಮತ್ತು ಸಾಮಾಜಿಕ ಏಕತೆಯ ಸಂದೇಶ ಸಾರಿತು.




