ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸುವಂತೆ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಧುಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಧುಗಿರಿ ಕಂದಾಯ ಉಪವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಲಜೀವನ್ ಮಿಷನ್ ಯೋಜನೆ 2022ರಲ್ಲಿ ಆರಂಭಗೊಂಡಿದ್ದು, 2024ರಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಜಿಲ್ಲೆಯಲ್ಲಿ ಇನ್ನೂ 442 ಕಾಮಗಾರಿಗಳು ಆರಂಭವಾಗದಿರುವುದು ಗಂಭೀರ ವಿಚಾರ. ಗುತ್ತಿಗೆ ನೀಡುವಾಗಲೇ ಕಾಮಗಾರಿ ಪೂರ್ಣಗೊಳಿಸಲು ಗಡುವು ನಿಗದಿಪಡಿಸಲಾಗಿರುತ್ತದೆ. ಗಡುವು ಮೀರಿದರೂ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯ 1,468 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 285 ಘಟಕಗಳು ರಾಸಾಯನಿಕ ಮಾಲಿನ್ಯಕ್ಕೆ ಒಳಗಾಗಿವೆ ಎಂಬ ಮಾಹಿತಿ ಸಭೆಯಲ್ಲಿ ನೀಡಲಾಯಿತು. ಹಲವು ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಯಾವುದೇ ಕುಡಿಯುವ ನೀರಿನ ಘಟಕಗಳ ಲ್ಯಾಬ್ ಟೆಸ್ಟ್ ಕೂಡ ನಡೆದಿಲ್ಲ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಸಿಎಂ, ಸಭೆಗಳಲ್ಲಿ ಒಂದೊಂದು ಬಾರಿ ಒಂದೊಂದು ರೀತಿಯ ಮಾಹಿತಿ ನೀಡುವುದನ್ನು ಸಹಿಸಲಾಗುವುದಿಲ್ಲ. ಜಿಲ್ಲಾ ಮಟ್ಟದ ಸಭೆಯಲ್ಲಿ ನೀಡಿದ ಮಾಹಿತಿ ಮತ್ತು ಈಗ ನೀಡುತ್ತಿರುವ ಮಾಹಿತಿ ನಡುವೆ ವ್ಯತ್ಯಾಸವಿದೆ. ಯಾವ ಮಾಹಿತಿಯನ್ನು ನಂಬಬೇಕು ಎಂದು ಪ್ರಶ್ನಿಸಿದರು.
ಮುಂದಿನ ಸಭೆಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿಗೆ ಸಂಬಂಧಿಸಿದ ಎಲ್ಲ ಯೋಜನೆಗಳ ಸಮಗ್ರ ಮಾಹಿತಿಯನ್ನು ಒದಗಿಸಬೇಕು. ಎಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳಿವೆ, ಅವುಗಳಿಗೆ ಎಷ್ಟು ಹಣ ಖರ್ಚಾಗಿದೆ ಹಾಗೂ ಪ್ರಸ್ತುತ ಅವುಗಳ ಸ್ಥಿತಿ ಏನು ಎಂಬ ವಿವರಗಳು ಅಧಿಕಾರಿಗಳ ಬಳಿ ಲಭ್ಯವಿರಬೇಕು ಎಂದು ಸೂಚಿಸಿದರು.
ಬರ ಪರಿಸ್ಥಿತಿಯಿಂದ ಜನರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ‘ವಿಬಿ ಜಿ ರಾಮ್ ಜಿ’ ಯೋಜನೆಯಡಿ ಹೆಚ್ಚಿನ ಉದ್ಯೋಗ ಒದಗಿಸಬೇಕು. ಶಿರಾ ತಾಲೂಕಿನಲ್ಲಿ ಈವರೆಗೆ ಉದ್ಯೋಗ ನೀಡದಿರುವುದು ಹಾಗೂ ಕೇವಲ ₹8 ಲಕ್ಷ ಖರ್ಚಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರತಿಯೊಂದಕ್ಕೂ ತಾಂತ್ರಿಕ ಸಮಸ್ಯೆ ಎಂಬ ನೆಪ ಹೇಳುವುದನ್ನು ನಿಲ್ಲಿಸಬೇಕು. ಜನರ ಸಂಕಷ್ಟದ ಸಂದರ್ಭದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಮಳೆಯ ಕೊರತೆಯಿಂದ ಶಿರಾ, ಪಾವಗಡ ಹಾಗೂ ಮಧುಗಿರಿ ತಾಲೂಕುಗಳಲ್ಲಿ ಕೃಷಿ ಚಟುವಟಿಕೆಗಳು ತೀವ್ರವಾಗಿ ಕುಂಠಿತಗೊಂಡಿವೆ. ಶಿರಾದಲ್ಲಿ ಶೇಂಗಾ, ರಾಗಿ ಸೇರಿದಂತೆ ವಿವಿಧ ಬೆಳೆಗಳು ಒಣಗುವ ಹಂತದಲ್ಲಿವೆ. ಸದ್ಯ ಮಳೆಯಾದರೂ ಹಲವು ಬೆಳೆಗಳು ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ. ನಾಲ್ಕು ತಾಲೂಕುಗಳಲ್ಲಿಯೂ ಬೆಳೆ ಪರಿಸ್ಥಿತಿ ಗಂಭೀರವಾಗಿದೆ ಎಂದು ಡಾ. ಪರಮೇಶ್ವರ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಎದುರಾದ ಸಂದರ್ಭದಲ್ಲಿ ತುರ್ತು ಕ್ರಮ ಕೈಗೊಳ್ಳಲು ತಹಶೀಲ್ದಾರ್‌ಗಳಿಗೆ ಅಗತ್ಯ ಅನುದಾನ ನೀಡಲಾಗಿದೆ. ‘ಹಣವಿಲ್ಲ’ ಎಂಬ ಕಾರಣವನ್ನು ಅಧಿಕಾರಿಗಳು ಹೇಳಬಾರದು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಜನರಿಗೆ ಉದ್ಯೋಗ ಒದಗಿಸುವ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಹೇಳಿದರು.
ಮಧುಗಿರಿ ಕಂದಾಯ ಉಪವಿಭಾಗದ ನಾಲ್ಕು ತಾಲೂಕುಗಳ ತಹಶೀಲ್ದಾರ್‌ಗಳು ಹಾಗೂ ಇಒಗಳು ‘ವಿಬಿ ಜಿ ರಾಮ್ ಜಿ’ ಯೋಜನೆಯಡಿ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, ಅವುಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆಯೇ ಎಂಬುದನ್ನು ಮೇಲಧಿಕಾರಿಗಳು ಪರಿಶೀಲಿಸಬೇಕು. ಜನರಿಗೆ ಉದ್ಯೋಗ ನೀಡುವಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹವಾಮಾನ ವೈಪರೀತ್ಯದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರತಿ ವಾರ ಮಾಹಿತಿ ನೀಡಬೇಕು. ಕಂದಾಯ, ಕೃಷಿ ಹಾಗೂ ಪಶುಸಂಗೋಪನಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಸರ್ಕಾರದ ಸೌಲಭ್ಯಗಳು ಅರ್ಹ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ, ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಧುಗಿರಿ ಉಪವಿಭಾಗಾಧಿಕಾರಿ ಶಿವಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




