ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಘಟಕ ಕಾಲೇಜುಗಳು ಹಾಗೂ ಮಾನಸಗಂಗೋತ್ರಿಯಲ್ಲಿ ಪಿಎಚ್.ಡಿ. ಪ್ರವೇಶ ಪಡೆದು ಸಂಶೋಧನೆ ನಡೆಸುತ್ತಿರುವ ಶಿಷ್ಯವೇತನ ರಹಿತ ಸಂಶೋಧಕರ ಬಳಗವು, ಎಲ್ಲಾ ಅರ್ಹ ಸಂಶೋಧಕರಿಗೂ ಶಿಷ್ಯವೇತನ ಮಂಜೂರು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿತು.
2026-27ನೇ ಸಾಲಿನಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷ ಘಟಕದ ವತಿಯಿಂದ ನೀಡಲಾಗುವ ಶಿಷ್ಯವೇತನಕ್ಕಾಗಿ 2025 ಹಾಗೂ 2026ನೇ ಸಾಲಿನ ಒಟ್ಟು 96 ಸಂಶೋಧಕರು ಅರ್ಜಿ ಸಲ್ಲಿಸಿದ್ದರೂ, ಮೈಸೂರು ವಿಶ್ವವಿದ್ಯಾನಿಲಯವು ಕೇವಲ 20 ಮಂದಿಗೆ ಮಾತ್ರ ಶಿಷ್ಯವೇತನ ಮಂಜೂರು ಮಾಡುವ ಮಾನದಂಡ ನಿಗದಿ ಪಡಿಸಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.
ಈ ಕ್ರಮದಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳ ಸಂಶೋಧಕರು ಶಿಷ್ಯವೇತನವಿಲ್ಲದೆ ಪಿಎಚ್.ಡಿ. ಶಿಕ್ಷಣ ಮುಂದುವರಿಸಲು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು. ಕಳೆದ ವರ್ಷಗಳಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಸಂಶೋಧಕರಿಗೂ ಶಿಷ್ಯವೇತನ ಮಂಜೂರಾಗಿದ್ದರೆ, ಈ ವರ್ಷ ಮಾತ್ರ ಮಿತಿಗೊಳಿಸಿರುವುದು ವಿದ್ಯಾರ್ಥಿ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವವಿದ್ಯಾನಿಲಯವು ಹೆಚ್ಚುವರಿ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗೆ ವರ್ಷಕ್ಕೆ ಸುಮಾರು ರೂ.23 ಕೋಟಿ ವೆಚ್ಚ ಮಾಡುತ್ತಿರುವುದನ್ನು ಉಲ್ಲೇಖಿಸಿದ ಪ್ರತಿಭಟನಾಕಾರರು, ಎಸ್.ಸಿ./ಎಸ್.ಟಿ. ಉಪಯೋಜನೆಗಳಿಗಾಗಿ ಮೀಸಲಿರಬೇಕಾದ ಅನುದಾನವನ್ನು ಸಂಶೋಧಕರಿಗೆ ಬಳಸದೇ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ದೂರಿದರು.

ಈ ವರ್ಷದ ರೂ.400 ಕೋಟಿ ಬಜೆಟ್‌ನಲ್ಲಿ ನಿಯಮಾನುಸಾರ 24 ಶೇಕಡಾ ಮೊತ್ತವನ್ನು ಎಸ್.ಸಿ./ಎಸ್.ಟಿ. ಉಪಯೋಜನೆಗಳಿಗೆ ಮೀಸಲಿಟ್ಟರೆ ಸುಮಾರು ₹96 ರಿಂದ ₹97 ಕೋಟಿ ರೂಪಾಯಿ ಅನುದಾನ ಒದಗಿಸಬೇಕಾಗುತ್ತದೆ. ಆದರೆ ಸಂಶೋಧನಾ ಶಿಷ್ಯವೇತನಕ್ಕೆ ಅಗತ್ಯ ಅನುದಾನ ನೀಡದೇ ವಿಶ್ವವಿದ್ಯಾನಿಲಯವು ಎಸ್.ಸಿ./ಎಸ್.ಟಿ. ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಆನ್‌ಲೈನ್ ಕಾರ್ಯಕ್ರಮಗಳಲ್ಲಿ ₹138 ಕೋಟಿ ರೂಪಾಯಿ ಲಾಭ ತೋರಿಸಿರುವ ವಿಶ್ವವಿದ್ಯಾನಿಲಯವು, ಸಂಶೋಧನಾ ಶಿಷ್ಯವೇತನ ನೀಡುವ ವಿಚಾರದಲ್ಲಿ ಮಾತ್ರ ಆರ್ಥಿಕ ಸಂಕಷ್ಟದ ನೆಪ ಹೇಳುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ತಿಳಿಸಿದರು.
ಹೆಚ್ಚುವರಿಯಾಗಿ ನೇಮಕಗೊಂಡಿರುವ 1234 ತಾತ್ಕಾಲಿಕ ಬೋಧಕೇತರ ಸಿಬ್ಬಂದಿಯನ್ನು ತೆರವುಗೊಳಿಸುವಂತೆ ಸರ್ಕಾರದ ನಿರ್ದೇಶನಗಳಿದ್ದರೂ, ವಿಶ್ವವಿದ್ಯಾನಿಲಯ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಇದು ಆಡಳಿತಾತ್ಮಕ ದುರಾಡಳಿತ ಮತ್ತು ಭ್ರಷ್ಟಾಚಾರದ ಉದಾಹರಣೆಯಾಗಿದೆ ಎಂದು ಹೇಳಿದರು.
ಪ್ರಸ್ತುತ ಸಾಲಿನಲ್ಲಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಹ ಸಂಶೋಧಕರಿಗೂ ಯಾವುದೇ ತಾರತಮ್ಯವಿಲ್ಲದೆ ಶಿಷ್ಯವೇತನ ಮಂಜೂರು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಅಂಗಡಿ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗಾಗಿ ಅಭಿಯಾನ: ಅಪರ ಜಿಲ್ಲಾಧಿಕಾರಿ ಆರ್ ಐಶ್ವರ್ಯ
ಪ್ರತಿಭಟನೆಯಲ್ಲಿ ದಸಂಸ ಹಿರಿಯ ಮುಖಂಡರಾದ ಚೋರನಹಳ್ಳಿ ಶಿವಣ್ಣ, ಯಡದೊರೆ ಮಾದೇವಯ್ಯ, ರವಿಕುಮಾರ್ ಮುಡಿಗುಂಡ, ನವೀನ್ ಅಳಗಂಚಿ, ಮಾದೇಶ್ ಸೀಗಿ, ದೀಪ ಮೌನದೊರೆ, ಧೀರಜ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಇದ್ದರು.




