ತುಮಕೂರು ನಗರದ ರೇಡಿಯೋ ಸಿದ್ಧಾರ್ಥ 90.8 ಸಿಆರ್‌ಎಸ್, ತುಮಕೂರು ಹಾಗೂ ಸಮುದಾಯ ರೇಡಿಯೋ ಸಂಘ-ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ “ರೇಡಿಯೋ ಆಲಿಸುವಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಕುರಿತು” ಎರಡು ದಿನಗಳ ಕಾರ್ಯಾಗಾರವನ್ನು ಜುಲೈ 10 ಮತ್ತು 11ರಂದು ಆಯೋಜಿಸಲಾಗಿದೆ.
ನಗರದ ಎಸ್‌ಎಸ್‌ಐಟಿ ಕ್ಯಾಂಪಸ್‌ನ ಪಿಜಿ ಸೆಮಿನಾರ್ ಹಾಲ್‌ನಲ್ಲಿ ಬೆಳಗ್ಗೆ 10.30ಕ್ಕೆ ಆರಂಭವಾಗಲಿರುವ ಕಾರ್ಯಾಗಾರವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ., ಮಂಜುನಾಥ್ ಡೋಳ್ಳಿನ್, ತುಮಕೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತ್ ರಾಜು, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಾಯಕ ಆಡಳಿತಾಧಿಕಾರಿ ಖಲಂದರ್ ಪಾಷ ಕೆ.ಎಚ್. ಹಾಗೂ ಅಖಂ ದಕ್ಷಿಣ ವಲಯದ ಜಂಟಿ ಕಾರ್ಯದರ್ಶಿ ಶಿವಶಂಕರ್ ಭಾಗವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು ಆಕಾಶವಾಣಿಯ ನಿವೃತ್ತ ಸಹಾಯಕ ನಿರ್ದೇಶಕಿ ಹಾಗೂ ಲೇಖಕಿ ಕಾನ್ಸೆಪ್ಟಾ ಫರ್ನಾಂಡಿಸ್, ವರ್ಪಾಸ್ ಮೀಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಆರ್. ನರಸಿಂಹಸ್ವಾಮಿ ಹಾಗೂ ಗುರು ರೇಣುಕಾ ಪ್ರೊಡಕ್ಷನ್ಸ್‌ನ ನಟ-ನಿರ್ಮಾಪಕ ನವೀನ್ ಎನ್.ಜಿ. ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಅಖಂ ಕರ್ನಾಟಕ ಅಧ್ಯಾಯದ ಅಧ್ಯಕ್ಷೆ ಡಾ. ರಶ್ಮಿ ಅಮ್ಮೆಂಬಳ, ಕಾರ್ಯದರ್ಶಿ ಭರತ್ ಬಿ. ಬಡಿಗೇರ್, ರೇಡಿಯೋ ಸಿದ್ಧಾರ್ಥ 90.8 ಸಿಆರ್‌ಎಸ್ ನಿರ್ದೇಶಕ ಡಾ. ಬಿ.ಟಿ. ಮುದ್ದೇಶ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ರೇಡಿಯೋ ಸಿದ್ಧಾರ್ಥ ಸಿಬ್ಬಂದಿ ಉಪಸ್ಥಿತರಿರಲಿದ್ದಾರೆ.
ರೇಡಿಯೋ ಕಾರ್ಯಕ್ರಮಗಳ ಗುಣಮಟ್ಟ ಹೆಚ್ಚಿಸುವುದು, ಪರಿಣಾಮಕಾರಿ ಪ್ರಸಾರ ಹಾಗೂ ಸಮುದಾಯದೊಂದಿಗೆ ಉತ್ತಮ ಸಂಪರ್ಕ ಸಾಧಿಸುವ ಕುರಿತು ಈ ಕಾರ್ಯಾಗಾರದಲ್ಲಿ ವಿಶೇಷವಾಗಿ ಚರ್ಚೆ ನಡೆಯಲಿದೆ.




