ಎಲ್ಲಾ ಯೋಜನೆಗಳ ಜಾರಿಗೆ ಅಂಗನವಾಡಿ ನೌಕರರನ್ನೇ ಬಳಸಿಕೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಅವರಿಗೆ ಕನಿಷ್ಠ ವೇತನ, ಪಿಂಚಣಿ ಹಾಗೂ ಸಾಮಾಜಿಕ ಭದ್ರತೆ ನೀಡಲು ಹಿಂದೇಟು ಹಾಕುತ್ತಿವೆ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ಆರೋಪಿಸಿದರು.
ನಗರದ ಜನ ಚಳುವಳಿ ಕೇಂದ್ರದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ರಿ), ಸಿಐಟಿಯು ತುಮಕೂರು ನಗರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಅಂಗನವಾಡಿ ಯೋಜನೆ ಆರಂಭವಾಗಿ 50 ವರ್ಷಗಳು ಕಳೆದಿವೆ. ಆದರೂ ಇದರಲ್ಲಿ ದುಡಿಯುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ, ಪಿಂಚಣಿ ಹಾಗೂ ಇತರ ಸಾಮಾಜಿಕ ಭದ್ರತೆ ಇಲ್ಲದೆ ದುಡಿಸಿಕೊಳ್ಳುವುದು ಸರಿಯಲ್ಲ. ಭಾರತೀಯ ಕಾರ್ಮಿಕ ಸಮ್ಮೇಳನದ ತೀರ್ಮಾನದಂತೆ ಇವರನ್ನು ಕಾರ್ಮಿಕರೆಂದು ಪರಿಗಣಿಸಿ, ತಕ್ಷಣವೇ ಕನಿಷ್ಠ ವೇತನ ಮತ್ತು ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತೆ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.
ಅಸಮಾನತೆ ಮತ್ತು ಲಾಭದಾಹವೇ ಪ್ರಧಾನವಾಗುತ್ತಿರುವ ಇಂದಿನ ದಿನಗಳಲ್ಲಿ ಮಾನವೀಯತೆ ಮರೀಚಿಕೆಯಾಗುತ್ತಿದೆ ಎಂದ ಅವರು, “ಶ್ರೀಮಂತರ ಸಾವಿರಾರು ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವ ಸರ್ಕಾರಗಳು, ದುಡಿದು ತಿನ್ನುವವರಿಗೆ ಕನಿಷ್ಠ ವೇತನ ನೀಡಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ” ಎಂದು ಕುಟುಕಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷೆ ಜಿ. ಕಮಲ, “ಕೇಂದ್ರ ಸರ್ಕಾರ 2018ರಿಂದ ಅಂಗನವಾಡಿ ನೌಕರರ ಸಂಬಳವನ್ನು ಒಂದು ನಯಾ ಪೈಸೆಯಷ್ಟೂ ಹೆಚ್ಚಿಸಿಲ್ಲ. ಬೆಲೆ ಏರಿಕೆಯಿಂದ ಬದುಕು ದುಸ್ತರವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು. ನಿರಂತರ ಹೋರಾಟಗಳ ನಂತರವೂ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದ ಅವರು, ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಪುಷ್ಪ ಕೆ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಬೀನಾ ಖಾತೋನ್ ತ್ರೈವಾರ್ಷಿಕ ವರದಿ ಮಂಡಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷೆ ಬಿ.ಕೆ. ಗೌರಮ್ಮ ವಹಿಸಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ
ಸಮ್ಮೇಳನದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಈ ಕೆಳಗಿನವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು:
– ಅಧ್ಯಕ್ಷರು: ಬಿ.ಕೆ. ಗೌರಮ್ಮ
– ಪ್ರಧಾನ ಕಾರ್ಯದರ್ಶಿ: ಜಬೀನಾ ಖಾತೋನ್
– ಖಜಾಂಚಿ: ಪುಷ್ಪಲತಾ ಎಸ್.
– ಉಪಾಧ್ಯಕ್ಷರು: ಕೋಮಲ, ರಾಧಾಮಣಿ, ಮಮತ, ಹಂಸ ಎಸ್., ಮೋಹಸೀನಾ
– ಕಾರ್ಯದರ್ಶಿಗಳು: ಭಾಗ್ಯಮ್ಮ ವಿ., ಬಷೀರ್ ಉನ್ನಿಸಾ, ಪುಷ್ಪ ಕೆ., ನಾಗರತ್ನ ಡಿ., ಪವಿತ್ರ, ಯಶೋಧಮ್ಮ, ಮೋಹಸಿನಾ




