ಎಐ (ಕೃತಕ ಬುದ್ಧಿಮತ್ತೆ) ಡೇಟಾ ಸೆಂಟರ್‌ಗಳ ಸ್ಥಾಪನೆಯಿಂದ ಯುವಜನರ ಉದ್ಯೋಗ, ಪರಿಸರ ಹಾಗೂ ಜಲಸಂಪನ್ಮೂಲಗಳ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಆರೋಪಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಗಾಂಧಿ ಸಹಜ ಬೇಸಾಯ ಆಶ್ರಮದ ನೇತೃತ್ವದಲ್ಲಿ ವಿವಿಧ ರೈತಪರ ಸಂಘಟನೆಗಳ ಸಹಯೋಗದೊಂದಿಗೆ ಆಗಸ್ಟ್ 6, 7 ಮತ್ತು 8ರಂದು ದೊಡ್ಡ ಹೊಸೂರಿನಲ್ಲಿ ಮೂರು ದಿನಗಳ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ತಿಳಿಸಿದರು.
ತುಮಕೂರು ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಿಡದಿ ಸಮೀಪ ಸುಮಾರು 9,470 ಎಕರೆ ಪ್ರದೇಶದಲ್ಲಿ ಟೌನ್‌ಶಿಪ್ ಯೋಜನೆ ಜಾರಿಗೆ ತರುವ ಉದ್ದೇಶ ಹೊಂದಿದ್ದು, ಅದರ ಭಾಗವಾಗಿ ಆಟೋಮೇಷನ್ ಹಾಗೂ ಎಐ ಡೇಟಾ ಸೆಂಟರ್ ಸ್ಥಾಪಿಸಲು ಮುಂದಾಗಿದೆ. ಈ ಯೋಜನೆಗೆ ಹೇಮಾವತಿ ನಾಲಾ ವ್ಯವಸ್ಥೆಯಿಂದ ಸುಮಾರು 70 ಕಿ.ಮೀ. ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ನೀರು ಒದಗಿಸುವ ಯೋಜನೆ ಇದೆ ಎಂದು ಆರೋಪಿಸಿದರು.
ಇದರಿಂದ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಭೂಮಿ ಮತ್ತು ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಲಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಹೊಸೂರಿನ ಗಾಂಧಿ ಸಹಜ ಬೇಸಾಯ ಆಶ್ರಮದಲ್ಲಿ ಮೂರು ದಿನಗಳ ಸತ್ಯಾಗ್ರಹ ಆಯೋಜಿಸಲಾಗಿದೆ ಎಂದು ಹೇಳಿದರು.
ಆಗಸ್ಟ್ 6ರಂದು ಎಐ ಡೇಟಾ ಸೆಂಟರ್‌ಗಳ ಪರಿಣಾಮಗಳ ಕುರಿತು ಅಧ್ಯಯನ ನಡೆಸಿರುವ ಅಮೆರಿಕದ ಸಂಶೋಧಕರು ಸೇರಿದಂತೆ ವಿವಿಧ ತಜ್ಞರು ವಿಚಾರ ಮಂಡಿಸಲಿದ್ದಾರೆ. ಆಗಸ್ಟ್ 7ರಂದು ದೊಡ್ಡ ಹೊಸೂರು ಸಮೀಪದ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಿ, ಎಐ ಡೇಟಾ ಸೆಂಟರ್‌ಗಳ ಸಾಧಕ-ಬಾಧಕಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ಆಗಸ್ಟ್ 8ರಂದು ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ರೈತ ನಾಯಕರು, ಹೋರಾಟಗಾರರು ಹಾಗೂ ವಿದ್ಯಾರ್ಥಿ-ಯುವಜನರೊಂದಿಗೆ ಚರ್ಚೆ ನಡೆಯಲಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಆಗಸ್ಟ್ 10ರಂದು ಕ್ವಿಟ್ ಇಂಡಿಯಾ ಚಳವಳಿಯ ಅಂಗವಾಗಿ ಕಿಸಾನ್ ಸಂಯುಕ್ತ ಹೋರಾಟ, ಜೆಸಿಟಿಯು ಹಾಗೂ ಇತರ ಸಂಘಟನೆಗಳ ಸಹಯೋಗದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ “ಜೈಲ್ ಭರೋ” ಚಳವಳಿಯನ್ನೂ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನಿ ಹಾಗೂ ಗಾಂಧಿ ಸಹಜ ಬೇಸಾಯ ಆಶ್ರಮದ ಮುಖ್ಯಸ್ಥ ಡಾ. ಮಂಜುನಾಥ್ ಮಾತನಾಡಿ, ಎಐ ಮತ್ತು ಆಟೋಮೇಷನ್ ತಂತ್ರಜ್ಞಾನಗಳ ಪರಿಣಾಮವಾಗಿ ಉದ್ಯೋಗಾವಕಾಶಗಳು ಕುಂಠಿತವಾಗಲಿದ್ದು, ವಿಶೇಷವಾಗಿ ಟೆಕ್ಸ್ಟೈಲ್ ಕ್ಷೇತ್ರದಲ್ಲಿ ಲಕ್ಷಾಂತರ ಮಹಿಳಾ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉದ್ಯೋಗ ಕಡಿಮೆಯಾದರೆ ಜನರ ಖರೀದಿ ಸಾಮರ್ಥ್ಯ ಕುಸಿದು, ಮಾರುಕಟ್ಟೆ ಹಾಗೂ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀಳಲಿದೆ. ಬಡತನ ನಿರ್ಮೂಲನೆಯ ಬದಲಿಗೆ ಬಡವರನ್ನೇ ನಿರ್ಮೂಲನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗುವ ಅಪಾಯವಿದೆ ಎಂದು ಹೇಳಿದರು.
ಒಂದು ಗಿಗಾವಾಟ್ ಸಾಮರ್ಥ್ಯದ ಎಐ ಡೇಟಾ ಸೆಂಟರ್‌ಗೆ ವರ್ಷಕ್ಕೆ ಸುಮಾರು 4 ಟಿಎಂಸಿ ನೀರು ಅಗತ್ಯವಿದ್ದು, ಇದರಿಂದ ನೀರಿನ ಬಿಕ್ಕಟ್ಟು ಉಂಟಾಗಬಹುದು. ಜೊತೆಗೆ ರಸ್ತೆ, ವಿಮಾನ ನಿಲ್ದಾಣ ಹಾಗೂ ಇತರೆ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ಕೃಷಿಭೂಮಿ ಕಳೆದುಕೊಳ್ಳುವ ಪರಿಸ್ಥಿತಿಯೂ ಎದುರಾಗಬಹುದು ಎಂದು ಅಭಿಪ್ರಾಯಪಟ್ಟರು.
ಮೂರು ದಿನಗಳ ಸತ್ಯಾಗ್ರಹದಲ್ಲಿ ತಜ್ಞರ ಉಪನ್ಯಾಸ, ಸಂವಾದ, ಪಾದಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಸುಮಾರು 2,500 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಅಮೆರಿಕದ ಸಂಶೋಧಕ ರೇಮೋಲ್, ದೇವಜೈನ್ ಹಾಗೂ ಶಾಸಕ ದರ್ಶನ ಪುಟ್ಟಣ್ಣಯ್ಯ ಎಐ ಡೇಟಾ ಸೆಂಟರ್‌ಗಳ ಕುರಿತು ವಿಚಾರ ಮಂಡಿಸಲಿದ್ದಾರೆ. ಪರಿಸರವಾದಿ ಸುರೇಶ್ ಹೆಬ್ಳಿಕರ್, ಬಡಗಲಪುರ ನಾಗೇಂದ್ರಪ್ಪ, ಮಹಿಮಾ ಜೆ. ಪಟೇಲ್ ಸೇರಿದಂತೆ ಹಲವು ತಜ್ಞರು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಯುಕ್ತ ಹೋರಾಟದ ಸಿ. ಯತಿರಾಜು ಮಾತನಾಡಿದರು. ರೈತ ಸಂಘದ ಮುಖಂಡರಾದ ಜಿ.ಎಸ್. ಶಂಕರಪ್ಪ, ನಾಗರತ್ನಮ್ಮ, ಚಿಕ್ಕಬೋರೇಗೌಡ, ವೆಂಕಟಪ್ಪಗೌಡ, ಕೆಂಚಪ್ಪ, ಲಕ್ಷ್ಮಣಗೌಡ, ಅರೇಹಳ್ಳಿ ಮಂಜುನಾಥ್, ಮೋಹನ್, ರಂಗಮುದ್ದಯ್ಯ, ಜಿ.ಜೆ. ಲೋಕೇಶ್, ಲಿಂಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.




