ಗುತ್ತಿಗೆದಾರರಿಂದ ಲಂಚದ ಹಣ ಪಡೆಯುತ್ತಿದ್ದ ಆರೋಪದ ಮೇರೆಗೆ ಗುಬ್ಬಿ ವಲಯ ಅರಣ್ಯಾಧಿಕಾರಿ ಕೆ.ಎಸ್. ಸತೀಶ್ ಚಂದ್ರ ಹಾಗೂ ಹೊರಗುತ್ತಿಗೆ ನೌಕರ ಶೌಕತ್ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಮಧ್ಯಾಹ್ನ ಹಣದ ಸಮೇತ ಬಂಧಿಸಿದ್ದಾರೆ.
2025-26ನೇ ಸಾಲಿನಲ್ಲಿ ಗುಬ್ಬಿ ಅರಣ್ಯ ವಲಯದಲ್ಲಿ ಮಂಜೂರಾಗಿದ್ದ ಸಿಸಿಟಿ ಅಗೆಯುವಿಕೆ, ಬದುಗಳ ಮೇಲೆ ಅಗೇವಾ ಸಸ್ಯ ನೆಡುವುದು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಉದ್ದೇಶಪೂರ್ವಕವಾಗಿ ತಡೆ ಒಡ್ಡಿ, ಶೇ.30ರಂತೆ ಒಟ್ಟು ₹5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ ₹3.50 ಲಕ್ಷಕ್ಕೆ ಒಪ್ಪಂದವಾಗಿದ್ದು, ಈಗಾಗಲೇ ಮೊದಲ ಕಂತಾಗಿ ₹50 ಸಾವಿರ ಪಡೆದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಲಂಚ ನೀಡಲು ಇಚ್ಛಿಸದ ಗುತ್ತಿಗೆದಾರ ಶಿವರಾಜ್ ಅವರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ ಬಾಕಿ ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ, ದೂರುದಾರರು ₹2 ಲಕ್ಷ ಹಣವನ್ನು ವಲಯ ಅರಣ್ಯಾಧಿಕಾರಿಗಳ ವಸತಿಗೃಹದಲ್ಲಿ ಹೊರಗುತ್ತಿಗೆ ನೌಕರ ಶೌಕತ್ ಅವರಿಗೆ ನೀಡುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಣ ಸ್ವೀಕರಿಸುತ್ತಿದ್ದ ಶೌಕತ್ ಅವರನ್ನು ವಶಕ್ಕೆ ಪಡೆದ ಅಧಿಕಾರಿಗಳು, ಪ್ರಕರಣದಲ್ಲಿ ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಇಬ್ಬರನ್ನೂ ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಲೋಕಾಯುಕ್ತ ಅಧೀಕ್ಷಕ ಟಿ. ಮಲ್ಲೇಶ್ ಅವರ ಮಾರ್ಗದರ್ಶನದಲ್ಲಿ ಉಪಾಧೀಕ್ಷಕ ಸಂತೋಷ್ ನೇತೃತ್ವದಲ್ಲಿ ನಿರೀಕ್ಷಕರಾದ ಮಂಜುನಾಥ್, ಟಿ. ರಾಜು, ರಾಘವೇಂದ್ರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.






