ವಿದ್ಯಾರ್ಥಿ, ಯುವಜನ ಹಾಗೂ ಜನವಿಜ್ಞಾನ ಚಳುವಳಿಗಳ ಕಾರ್ಯಕರ್ತರಿಗೆ ತಾಯಿಯಂತೆ ಆಸರೆಯಾಗಿದ್ದ, ಎಲ್ಲರ ಪ್ರೀತಿಯ ‘ಉಮಕ್ಕಾ’ ಎಂದೇ ಪರಿಚಿತರಾಗಿದ್ದ ಸಿ. ಉಮಾ ಅವರು ಭಾನುವಾರ ಸಂಜೆ 5.30ಕ್ಕೆ ನಿಧನರಾಗಿದ್ದಾರೆ. ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಹಿರಿಯ ಹೋರಾಟಗಾರ ಸಿ. ಯತಿರಾಜು ಅವರ ಪತ್ನಿಯಾಗಿದ್ದ ಉಮಾ ಅವರು, ಹಿರಿಯ ಸಾಹಿತಿ ವಿ. ಚಿಕ್ಕವೀರಯ್ಯ ಅವರ ಪುತ್ರಿಯಾಗಿದ್ದರು. 1990ರ ದಶಕದಲ್ಲಿ ವಿದ್ಯಾರ್ಥಿ ಚಳುವಳಿ, ಯುವಜನ ಚಳುವಳಿ ಹಾಗೂ ಜನವಿಜ್ಞಾನ ಚಳುವಳಿಗಳ ಕಾರ್ಯಕರ್ತರು ಹೋರಾಟ, ಸಭೆ ಹಾಗೂ ಸಂಘಟನಾ ಕಾರ್ಯಗಳಲ್ಲಿ ನಿರತರಾಗಿದ್ದ ಸಂದರ್ಭಗಳಲ್ಲಿ ಯಾವುದೇ ಬೇಸರವಿಲ್ಲದೆ ಆತ್ಮೀಯವಾಗಿ ಅನ್ನ ನೀಡಿ, ಅವರಿಗೆ ತಾಯಿಯಂತೆಯೇ ಕಾಳಜಿ ವಹಿಸುತ್ತಿದ್ದರು. ಈ ಕಾರಣದಿಂದಲೇ ಚಳುವಳಿಗಳ ಕಾರ್ಯಕರ್ತರ ನಡುವೆ ಅವರು “ಜನ ಚಳುವಳಿಗಳ ಅನ್ನದಾತೆ” ಎಂಬ ಗೌರವಕ್ಕೆ ಪಾತ್ರರಾಗಿದ್ದರು.
ಅವರ ಸರಳತೆ, ಆತಿಥ್ಯ, ಮಾನವೀಯತೆ ಮತ್ತು ಚಳುವಳಿಗಳ ಬಗ್ಗೆ ಹೊಂದಿದ್ದ ಬದ್ಧತೆ ಅನೇಕ ಕಾರ್ಯಕರ್ತರ ಮನಸ್ಸಿನಲ್ಲಿ ಅಳಿಸಲಾಗದ ನೆನಪುಗಳಾಗಿ ಉಳಿದಿವೆ. ಅವರ ನಿಧನದ ಸುದ್ದಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪ್ರಗತಿಪರ ವಲಯದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ.
ಮೃತರ ಅಂತ್ಯಕ್ರಿಯೆಯು ಆಗಸ್ಟ್ 3, 2026 (ಸೋಮವಾರ) ಬೆಳಿಗ್ಗೆ 10 ಗಂಟೆಗೆ, ತುಮಕೂರಿನ ಶ್ರೀದೇವಿ ಆಸ್ಪತ್ರೆ ಸಮೀಪದ ಲಿಂಗಾಪುರದಲ್ಲಿರುವ ಪ್ಯಾಲಿಯೇಟಿವ್ ಕೇಂದ್ರ (ರಿಮ್ಸ್ ಆಸ್ಪತ್ರೆ ಪಕ್ಕ) ಸಮೀಪದ ಅವರ ಜಮೀನಿನಲ್ಲಿ ನಡೆಯಲಿದೆ.
ಕುಟುಂಬಸ್ಥರು, ಬಂಧು-ಬಳಗ, ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಲಿದ್ದಾರೆ.




