ರಾಜ್ಯದ ಸಚಿವ ಸಂಪುಟದಲ್ಲಿ ಎಡಗೈ (ಮಾದಿಗ) ಸಮುದಾಯಕ್ಕೆ ಬಲಗೈ ಸಮುದಾಯದಷ್ಟೇ ಸಮಾನ ಅವಕಾಶಗಳನ್ನು ನೀಡಬೇಕು ಮತ್ತು ಹಿರಿಯ ರಾಜಕಾರಣಿ ಕೆ.ಹೆಚ್. ಮುನಿಯಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಕಲ್ಪಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಇದರ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಒಳಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು.
ತುಮಕೂರು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯದಂತೆ ರಾಜಕೀಯ ಪ್ರಜಾಪ್ರಭುತ್ವದಲ್ಲಿ ಎಲ್ಲಾ ಶೋಷಿತ ಸಮುದಾಯಗಳಿಗೆ ಸಮಾನವಾದ ರಾಜಕೀಯ ಪ್ರಾತಿನಿಧ್ಯ ಸಿಗಬೇಕಾದುದು ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು. ಪರಿಶಿಷ್ಟ ಜಾತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಬಹುಸಂಖ್ಯಾತ ಮಾದಿಗ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಹೆಚ್ಚಿನ ಮತ್ತು ಪ್ರಭಾವಶಾಲಿ ಸ್ಥಾನಗಳನ್ನು ನೀಡಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಮುಂದುವರೆದು, ಒಳಮೀಸಲಾತಿಯನ್ನು ಬಲಗೈ ಮತ್ತು ಎಡಗೈ ಸಮುದಾಯಗಳಿಗೆ ಸಮಾನವಾಗಿ ಹಂಚಿ ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಸುಮಾರು 40 ಲಕ್ಷ ಜನಸಂಖ್ಯೆ ಇರುವ ಮಾದಿಗ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಮತ್ತು ಎರಡು ಪ್ರಮುಖ ಸಚಿವ ಸ್ಥಾನಗಳನ್ನು ನೀಡದೆ ಹೋದರೆ, ಒಳಮೀಸಲಾತಿ ಅನುಷ್ಠಾನದ ಮಾತುಗಳು ಕೇವಲ ಬಾಯಿಮಾತಿನ ಬದನೆಕಾಯಿಯಂತಾಗುತ್ತವೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಇದರೊಂದಿಗೆ, ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ರಾಜಕಾರಣಿ, 7 ಬಾರಿ ಸಂಸದರಾಗಿ ಹಾಗೂ 2 ಬಾರಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿರುವ ಕೆ.ಹೆಚ್. ಮುನಿಯಪ್ಪ ಅವರಿಗೆ ಪ್ರಸ್ತುತ ಇರುವ ಆಹಾರ ಖಾತೆಯಿಂದ ಬಿಡುಗಡೆಗೊಳಿಸಿ, ಸಮುದಾಯದ ಏಳಿಗೆಗೆ ಪೂರಕವಾಗಿರುವ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ನೀಡಬೇಕು. ಪರಿಶಿಷ್ಟರಲ್ಲೇ ಬಹುಸಂಖ್ಯಾತರಾದ ಮಾದಿಗ ಸಮುದಾಯದವರಾದ ಆರ್.ಬಿ. ತಿಮ್ಮಾಪುರ ಅವರನ್ನೊಳಗೊಂಡಂತೆ ಒಟ್ಟು ಮೂವರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಸಮುದಾಯಕ್ಕೆ ಶಕ್ತಿ ತುಂಬಬೇಕು. ಹಾಗೇನಾದರೂ ಸೂಕ್ತ ಖಾತೆಗಳನ್ನು ನೀಡದಿದ್ದರೆ, ಮಾದಿಗರ ವಿಷಯದಲ್ಲಿ ಈ ಸರ್ಕಾರದ ‘ಹಿಡನ್ ಅಜೆಂಡಾ’ ಏನೆಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಒಳಮೀಸಲಾತಿ ವರದಿಗಳ ಹಂಚಿಕೆ ಕುರಿತು ತೀವ್ರ ಆಸಮಾಧಾನ ವ್ಯಕ್ತಪಡಿಸಿದ ಸಮಿತಿ ಪ್ರಮುಖ ನಾಯಕ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಒಳಮೀಸಲಾತಿ ಕುರಿತು ಸುದೀರ್ಘ ಅಧ್ಯಯನ ನಡೆಸಿ ವರದಿ ನೀಡಿದ್ದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ಒಳಮೀಸಲಾತಿ ವರದಿ ಹಾಗೂ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಗಳನ್ನು ತಿರಸ್ಕರಿಸಿರುವುದು ಸರಿಯಲ್ಲ ಎಂದರು. ಯಾರೋ ಕೆಲವೇ ಕೆಲವು ಬಲಾಢ್ಯರ ಒತ್ತಡಕ್ಕೆ ಮಣಿದು ಮೀಸಲಾತಿಯನ್ನು ಮೂರು ಗುಂಪುಗಳಾಗಿ ಮಾಡುವುದಕ್ಕಾಗಿಯೇ ಸರ್ಕಾರಗಳು ಆಯೋಗಗಳನ್ನು ರಚಿಸಬೇಕಿತ್ತೇ ಎಂದು ಅವರು ಪ್ರಶ್ನಿಸಿದರು.
ದಲಿತ ಸಮುದಾಯದ ಬಲಾಢ್ಯ ಸಚಿವರುಗಳೇ ಒಳಮೀಸಲಾತಿಯನ್ನು ತಮಗೆ ಅನುಕೂಲವಾಗುವಂತೆ ಹಂಚಿಕೆ ಮಾಡಿಕೊಂಡಿರುವುದರಿಂದ ಎಡಗೈ ಮತ್ತು ಅಲೆಮಾರಿ ಸಮುದಾಯಗಳಿಗೆ ಎಂದೆಂದೂ ಸರಿಪಡಿಸಲಾಗದಷ್ಟು ಒಳಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಮುಖಂಡರು ಆರೋಪಿಸಿದರು. ಯಾರೂ ಒಳಮೀಸಲಾತಿಯ ಸಾಮಾಜಿಕ ನ್ಯಾಯದ ಪರವಾಗಿ ಗಟ್ಟಿಯಾಗಿ ನಿಲ್ಲಬೇಕಿತ್ತೋ, ಅವರೇ ತಮ್ಮ ಸಮುದಾಯಗಳಿಗೆ ಅನುಕೂಲವಾಗುವಂತೆ ಹಂಚಿಕೆ ಮಾಡಿಕೊಂಡಿರುವುದು ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಕ್ಕೆ ಸಂಪೂರ್ಣ ವಿರುದ್ಧವಾದದ್ದಾಗಿದೆ. ಮೊದಲು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮೀಸಲಾತಿಯೇ ಸಿಗದಂತಹ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಮೊದಲ ಆದ್ಯತೆ ನೀಡಬೇಕಿತ್ತು. ಅದನ್ನು ಬಿಟ್ಟು ಈಗಾಗಲೇ ಹೆಚ್ಚು ಮೀಸಲಾತಿ ಸೌಲಭ್ಯ ಪಡೆದವರೇ ಒಳಮೀಸಲಾತಿಯಲ್ಲೂ ಸಿಂಹಪಾಲು ಪಡೆದಿರುವುದು ಸಂವಿಧಾನದ ಸಮಾನತೆಯ ಆಶಯವನ್ನು ಕಾಂಗ್ರೆಸ್ ಸರ್ಕಾರ ಗಾಳಿಗೆ ತೂರಿ ದ್ರೋಹವೆಸಗಿದಂತಾಗಿದೆ ಎಂದು ಹೋರಾಟಗಾರರು ದೂರಿದರು.
ಮುಂದುವರೆದು ಈಗಲಾದರೂ ಎಚ್ಚೆತ್ತುಕೊಂಡು ಸಚಿವ ಸಂಪುಟದಲ್ಲಿ ಎಡಗೈ ಸಮುದಾಯಕ್ಕೆ ಬಲಗೈ ಸಮುದಾಯದಷ್ಟೇ ಸಮಾನ ಅವಕಾಶಗಳನ್ನು ನೀಡಬೇಕು ಎಂದು ಒತ್ತಾಯಿಸಿದ ಸಮಿತಿಯು, ತಾತ್ವಿಕವಾಗಿ ಜಾರಿಯಾಗಿರುವ ಒಳಮೀಸಲಾತಿಯನ್ನು ಕೇವಲ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಕ್ಕೆ ಸೀಮಿತಗೊಳಿಸಬಾರದು ಎಂದು ಆಗ್ರಹಿಸಿತು. ಬದಲಿಗೆ ಎಲ್ಲೆಲ್ಲಿ ಮೀಸಲಾತಿ ನಿಯಮಗಳು ಜಾರಿಯಲ್ಲಿದೆಯೋ ಅಲ್ಲಲ್ಲೆಲ್ಲಾ ಒಳಮೀಸಲಾತಿಯನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು. ಹಾಗೆಯೇ, ರಾಜ್ಯದಲ್ಲಿರುವ 59 ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ತಕ್ಷಣವೇ ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪಿಸಿ, ಆ ಸಮುದಾಯದ ಮುಖಂಡರನ್ನೇ ಅದಕ್ಕೆ ಅಧ್ಯಕ್ಷರನ್ನಾಗಿ ನೇಮಿಸಬೇಕು. ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಮಾದಿಗ ಸಮುದಾಯದ ಮುಖಂಡರಿಗೆ ವಿವಿಧ ನಿಗಮ ಮಂಡಳಿ ಹಾಗೂ ಪ್ರಾಧಿಕಾರಗಳಲ್ಲಿ ಸೂಕ್ತ ಅಧಿಕಾರ ಮತ್ತು ಅವಕಾಶಗಳನ್ನು ನೀಡಬೇಕು ಎಂದು ಅವರು ಒಕ್ಕೊರಲಿನಿಂದ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ಬಸವರಾಜ್ ಕೌತಾಳ್, ಕರಿಯಪ್ಪ ಗುಡಿಮನಿ, ದಲಿತ ಸಂಘರ್ಷ ಸಮಿತಿಯ (ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯಾಧ್ಯಕ್ಷ ಎಂ.ಗುರುಮೂರ್ತಿ ಶಿವಮೊಗ್ಗ, ಮಾದಿಗ ದಂಡೋರದ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್, ಒಳಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ನರಸೀಯಪ್ಪ, ಬಿ.ಹೆಚ್.ಗಂಗಾಧರ್, ಅರೆ ಅಲೆಮಾರಿ ರಾಜ್ಯಾಧ್ಯಕ್ಷ ಚಾವಡಿ ಲೋಕೇಶ್ ಹಾಗೂ ದ.ಸಂ.ಸ. ರಾಜ್ಯಾಧ್ಯಕ್ಷ ಜೀವನಹಳ್ಳಿ ನಾರಾಯಣ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.




