ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾತ್ರೋರಾತ್ರಿ ಗುಡಿಸಲು ನಿರ್ಮಿಸಿಕೊಂಡು ಪ್ರತಿಭಟನೆಗೆ ಮುಂದಾಗಿದ್ದ ಭೂಮಿ ಮತ್ತು ವಸತಿ ವಂಚಿತರನ್ನು ಪೊಲೀಸರು ಸೋಮವಾರ ಬೆಳಿಗ್ಗೆ ವಶಕ್ಕೆ ಪಡೆದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಮೇ 19ರಂದು ತುಮಕೂರು ಜೂನಿಯರ್ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದ 3 ವರ್ಷದ ಸಾಧನಾ ಸಮಾವೇಶ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಇದಕ್ಕೆ ಒಂದು ದಿನ ಮುಂಚಿತವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುಡಿಸಲುಗಳನ್ನು ಹಾಕಿಕೊಂಡು ಪ್ರತಿಭಟನೆ ಮಾಡಲು ಮುಂದಾದ ಪ್ರತಿಭಟನಾಕಾರರನ್ನು ಪೋಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಕೊರಟಗೆರೆ, ಮಧುಗಿರಿ, ಚಿಕ್ಕನಾಯಕನಹಳ್ಳಿ ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ಆಗಮಿಸಿ ಭೂಮಿ ವಸತಿ ವಂಚಿತರು ಧರಣಿ ನಡೆಸಲು ಮುಂದಾಗಿದ್ದರು.
ಈ ಹಿಂದೆಯೇ ಸಹ ಹಲವು ಬಾರಿ ಹೋರಾಟಗಳನ್ನು ಮಾಡಿದ್ದರು ಸಹ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ತುಮಕೂರಿನಲ್ಲಿ ಇದೇ 19ರಂದು ಸರ್ಕಾರ ಮೂರು ವರ್ಷಗಳ ಸಾಧಾನ ಸಮಾವೇಶ ನಡೆಸುತ್ತಿರುವ ಹಿನ್ನಲೆಯಲ್ಲಿ ಹೋರಾಟಗಾರರು ಸರ್ಕಾರದ ಗಮನ ಸೆಳೆಯಲು ಈ ರೀತಿಯ ಹೋರಾಟವನ್ನು ನಡೆಸುವ ತೀರ್ಮಾನ ಮಾಡಿದ್ದರು ಎನ್ನಲಾಗಿದೆ. ಸತತವಾಗಿ ವಿವಿಧ ಬೃಹತ್ ಕಾರ್ಯಕ್ರಮಗಳನ್ನು ಮಾಡುತ್ತಾ ಜಿಲ್ಲಾಡಳಿತ ಇವೆಂಟ್‌ಗಳನ್ನು ನಡೆಸುವ ಕಂಪನಿಯಂತೆ ವರ್ತಿಸುತ್ತಿದೆಯೇ ಹೊರತು ಜನ ಸಾಮಾನ್ಯರ ನೋವುಗಳಿಗೆ ಸ್ಫಂದಿಸುತ್ತಿಲ್ಲ ಎಂಬ ಆರೋಪಗಳು ಇತ್ತಿಚಿಗೆ ಕೇಳಿಬರುತ್ತಿವೆ. ಹೋರಾಟದ ನೇತೃತ್ವ ವಹಿಸಿದ್ದ ನಾಗಭೂಷಣ್ ಹಂದ್ರಾಳ್ ಮತ್ತು ಇರರನ್ನು ಪೋಲೀಸರು ಎಳೆದಾಡಿರುವ ವಿಡಿಯೋಗಳು ವೈರಲ್ ಆಗುತ್ತಿವೆ.
ಭೂಮಿ ವಸತಿ ಹೋರಾಟಗಾರರನ್ನು ಬಂಧಿಸಿರುವ ಪೋಲಿಸರ ಕ್ರಮವನ್ನು ಸ್ಥಳೀಯವಾಗಿ ವಿವಿಧ ಸಂಘಟನೆಯ ಮುಖಂಡರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಡವರ ನೋವನ್ನು ಆಲಿಸಿ ಜನಪ್ರತಿನಿಧಿಗಳ ಗಮನಕ್ಕೆ ಸಮಸ್ಯೆಗಳನ್ನು ತಲುಪಿಸಬೇಕಾದ ಜಿಲ್ಲಾಡಳಿತ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವುದು ಖಂಡನಾರ್ಹ. ಭೂಮಿ ಮತ್ತು ವಸತಿರ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡಬೇಕಾದ ಸರ್ಕಾರಗಳು ತಮ್ಮ ಸಾಧನೆಯ ಸಾಲಿಗೆ ಸ್ಥಳೀಯ ತುಮಕೂರಿನ ಸಮಸ್ಯೆಗಳನ್ನು ಪರಿಹರಿಸಿದ ನಂತರ ಸಾಧಾನ ಸಮಾವೇಶ ಮಾಡಿದ್ದರೆ ಅದಕ್ಕೆ ಒಂದು ಅರ್ಥ ಬರುತ್ತಿತ್ತು. ಎಂದು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಮುಖಂಡರಾದ ಕುಮಾರ್ ಸಮತಳ ಅವರು ಅಕ್ರೋಶ ವ್ಯಕ್ತಪಡಿಸಿದರು.
ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸಂವಿಧಾನದ 12 ರಿಂದ 35 ನೇ ವಿಧಿಗಳ ವರೆಗೆ ಆರು ಮೂಲಭೂತ ಹಕ್ಕುಗಳಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ವಾಕ್ ಸ್ವಾತಂತ್ರವನ್ನು ಕೊಟ್ಟಿದ್ದಾರೆ ಹಾಗೂ ವ್ಯವಸ್ಥೆಯ ವಿರುದ್ಧ ಸರ್ಕಾರದ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ನಮ್ಮ ಭಾರತದ ಸಂವಿಧಾನ ಭಾರತದ ಪ್ರತಿಯೊಬ್ಬ ಪ್ರಜೆಗೂ ನೀಡಿದೆ ಆದುದರಿಂದ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸುವುದು ಮಾನವನ ನಿಜವಾದ ಧರ್ಮ ನಾಗಭೂಷಣ ಹಂದ್ರಾಳ ಹಾಗೂ ಅವರ ಸದಸ್ಯರನ್ನ ಬಂಧಿಸಿರುವ ಘಟನೆ ನಾಚಿಕೆ ಹಾಗೂ ತಲೆತಗ್ಗಿಸುವಂತಹ ಘಟನೆ ಅವರು ಕೇಳುತ್ತಿರುವ ವಸತಿ ಹೀನರಿಗೆ ವಸತಿ ವ್ಯವಸ್ಥೆ ಭೂಮಿ ಇಲ್ಲದವರಿಗೆ ಭೂಮಿ ವ್ಯವಸ್ಥೆ ಮಾಡಿಕೊಟ್ಟರೆ ಏನಕ್ಕೆ ಪ್ರತಿಭಟನೆ ಮಾಡುತ್ತಾರೆ ಈ ಸರ್ಕಾರದ ಪ್ರತಿನಿಧಿಗಳಿಗೆ ಹಾಗೂ ಆಡಳಿತಂಗದ ಆಡಳಿತ ಅಧಿಕಾರಿಗಳಿಗೆ ಅಷ್ಟು ತಿಳಿದೆ ಇಲ್ಲದಿರುವುದು ದುರಂತವೇ ಸರಿ ಒಟ್ಟಾರೆಯಾಗಿ ಮೂರು ವರ್ಷದ ಸಾಧನ ಸಮಾವೇಶ ಬಡವರಿಗೆ ನಿವೇಶನ ಜಮೀನು ಸೈಟುಗಳು ಇಲ್ಲದೆ ಮಾಡುತ್ತಿರುವುದು ಯಾರನ್ನು ಮೆಚ್ಚಿಸಲು ಸರ್ಕಾರ ಹೊರಟಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ವಕೀಲರಾದ ರಂಗಧಾಮಯ್ಯನವರು ಆಗ್ರಹಿಸಿದ್ದಾರೆ.




