ಸ್ಲಂ ಪ್ರದೇಶಗಳ ಮಕ್ಕಳು ಶಿಕ್ಷಣದ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಕಷ್ಟದ ಜೀವನದಿಂದ ಉತ್ತಮ ಬದುಕಿನತ್ತ ಸಾಗಲು ವಿದ್ಯೆಯೇ ಪ್ರಮುಖ ಸಾಧನ ಎಂದು ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಸ್ಲಂ ಜನಾಂದೋಲನ ಕರ್ನಾಟಕದ ವತಿಯಿಂದ ಆಯೋಜಿಸಿದ್ದ 24ನೇ ವರ್ಷದ ಸ್ಲಂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಲಂ ಪ್ರದೇಶಗಳ ಪೋಷಕರು ಸಂಕಷ್ಟದ ನಡುವೆಯೂ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ. ಕಳೆದ 24 ವರ್ಷಗಳಿಂದ ಜಾತ್ಯಾತೀತವಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಸ್ಲಂ ಸಮಿತಿಯ ಕಾರ್ಯ ಅಭಿನಂದನೀಯವಾಗಿದೆ ಎಂದರು.
ಶಿಕ್ಷಣದ ವೆಚ್ಚ ಹೆಚ್ಚಾದರೂ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಬೇಕು. “ಸ್ಲಂ” ಎಂಬ ಪದದ ಬಳಕೆಯನ್ನು ನಿಲ್ಲಿಸಿ, ಸರ್ಕಾರ ಪರ್ಯಾಯ ಹೆಸರನ್ನು ನೀಡುವಂತೆ ಸದನದಲ್ಲಿ ಒತ್ತಾಯಿಸುವುದಾಗಿ ತಿಳಿಸಿದರು.
ವಸತಿ ಯೋಜನೆಗಳ ಕುರಿತು ಮಾತನಾಡಿದ ಅವರು, ಸ್ಲಂ ನಿವಾಸಿಗಳಿಗೆ ಗುಣಮಟ್ಟದ ಮೂಲಸೌಕರ್ಯ ಕಲ್ಪಿಸಲು 200ರಿಂದ 500 ಮನೆಗಳ ವಸತಿ ಸಮುಚ್ಚಯಗಳ ನಿರ್ಮಾಣ ಅಗತ್ಯವಿದೆ ಎಂದು ಹೇಳಿದರು. ಅಲ್ಲದೆ, ನಿವೇಶನ ರಹಿತ 31 ಒಂಟಿ ಮಹಿಳೆಯರಿಗೆ ಹೊನ್ನೇನಹಳ್ಳಿಯ 192 ಮನೆಗಳ ವಸತಿ ಸಮುಚ್ಚಯದಲ್ಲಿ ಆದ್ಯತೆ ನೀಡುವ ಭರವಸೆಯನ್ನೂ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಮಾತನಾಡಿ ಶಿಕ್ಷಣವೇ ಸಾಮಾಜಿಕ ಅಸಮಾನತೆಯನ್ನು ನಿವಾರಿಸುವ ಶಕ್ತಿಯಾಗಿದೆ ಎಂದು ಹೇಳಿದರು. “ಹಸಿವನ್ನು ಕಂಡವರು ಸಾಧನೆ ಮಾಡುತ್ತಾರೆ. ಜ್ಞಾನದ ಹಸಿವುಳ್ಳವರು ದೇಶವನ್ನು ಮುನ್ನಡೆಸುತ್ತಾರೆ. ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು ಹಾಗೂ ಸಮಾಜಕ್ಕೆ ಬೆಳಕಾಗಬೇಕು” ಎಂದು ಕರೆ ನೀಡಿದರು.
ಚರಕ ಆಸ್ಪತ್ರೆಯ ಡಾ. ಬಸವರಾಜು ಮಾತನಾಡಿ, ವಿದ್ಯಾರ್ಥಿಗಳು ವೈಚಾರಿಕತೆ ಬೆಳೆಸಿಕೊಂಡು ಮೂಢನಂಬಿಕೆಗಳನ್ನು ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.
ಹಿರಿಯ ಚಿಂತಕ ಕೆ. ದೊರೈರಾಜು ಮಾತನಾಡಿ ಅನೇಕ ಸಾಧಕರು ಶೋಷಿತ ಸಮುದಾಯದಿಂದ ಬಂದವರೇ ಆಗಿದ್ದಾರೆ. ಸ್ಲಂ ಪ್ರದೇಶಗಳ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಬೇಕು ಎಂದು ಹೇಳಿದರು.
ಸ್ಲಂಜನಿಂದೋಲನ ಕರ್ನಾಟಕದ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿ ಕಳೆದ 24 ವರ್ಷಗಳಿಂದ ನಡೆಯುತ್ತಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸ್ಲಂ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆತ್ಮವಿಶ್ವಾಸ ಬೆಳೆಸಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ 60 ರಿಂದ 96 ಶೇಕಡಾ ಅಂಕ ಗಳಿಸಿದ ವಿವಿಧ ಸ್ಲಂ ಪ್ರದೇಶಗಳ 65 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಭಾನುಪ್ರತಾಪ್ ಸಿಂಹ, ತುಮಕೂರು ವಿವಿಯ ಶೇಖರ್, ಮಾಜಿ ನಗರಸಭೆ ಸದಸ್ಯರಾದ ಎ. ಶ್ರೀನಿವಾಸ್ ಹಾಗೂ ಲಕ್ಷ್ಮೀ ನರಸಿಂಹರಾಜು, ಸ್ಲಂ ಸಮಿತಿ ಗೌರವಾಧ್ಯಕ್ಷೆ ದೀಪಿಕಾ, ಅನುಪಮಾ, ತುಮಕೂರು ನಗರ ಠಾಣೆಯ ರಾಮಚಂದ್ರಯ್ಯ, ಮಂಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅರುಣ್ ಟಿ.ಜಿ. ನಿರೂಪಿಸಿದರು.




