ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕರಾಮುವಿ) ಪರೀಕ್ಷಾ ಕೇಂದ್ರಗಳಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿದ್ದು, ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿರುವ ಶಂಕೆಯಿದೆ ಎಂದು ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕರಾಮುವಿ ಖಾಯಂ ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ. ಜಗದೀಶ್ ಬಾಬು ಹೆಚ್.ಕೆ. ಆರೋಪಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳದ ದಡೇಗಲ್ನಲ್ಲಿರುವ ನಿಂಗೋಜಿ ಎಜುಕೇಷನ್ ಟ್ರಸ್ಟ್ ಪರೀಕ್ಷಾ ಕೇಂದ್ರದಲ್ಲಿ ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಯೇ ಪರೀಕ್ಷಾ ಮುಖ್ಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಮುಂಚಿತವಾಗಿ ಸ್ವೀಕರಿಸುವುದು, ತೆರೆಯುವುದು ಹಾಗೂ ಉತ್ತರಪತ್ರಿಕೆಗಳನ್ನು ನಿರ್ವಹಿಸುವ ಜವಾಬ್ದಾರಿ ಮುಖ್ಯ ಅಧೀಕ್ಷಕರದ್ದಾಗಿದ್ದು, ಅವರೇ ಪರೀಕ್ಷಾರ್ಥಿಯಾಗಿರುವುದು ಪ್ರಶ್ನೆಪತ್ರಿಕೆಗಳ ಗೌಪ್ಯತೆ ಮತ್ತು ಪರೀಕ್ಷೆಯ ಪಾರದರ್ಶಕತೆಯ ಬಗ್ಗೆ ಅನುಮಾನ ಮೂಡಿಸಿದೆ ಎಂದರು.
ಕಳೆದ ನಾಲ್ಕೈದು ವರ್ಷಗಳಿಂದ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಹಣ ಪಡೆದು ಮೊಬೈಲ್, ಪುಸ್ತಕಗಳ ಮೂಲಕ ನಕಲು ಮಾಡಲು ಅವಕಾಶ ನೀಡಲಾಗುತ್ತಿದೆ. ಪ್ರತಿ ವಿಷಯಕ್ಕೆ ₹1,000ರಿಂದ ₹5,000ರವರೆಗೆ ಹಣ ವಸೂಲಿ ಮಾಡಲಾಗುತ್ತಿದೆ. ಕೆಲವೆಡೆ ಬೇರೆಯವರಿಂದ ಪರೀಕ್ಷೆ ಬರೆಯಿಸುವ ಅಕ್ರಮವೂ ನಡೆಯುತ್ತಿದೆ. ಇದರಿಂದ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿರುವ ಶಂಕೆಯಿದೆ ಎಂದು ಆರೋಪಿಸಿದರು.
2023ರಲ್ಲಿ ಚಾಮರಾಜನಗರದಲ್ಲಿ ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಪ್ರಶ್ನೆಪತ್ರಿಕೆಗಳನ್ನು ವಾಟ್ಸ್ಆ್ಯಪ್ ಮೂಲಕ ಮಾರಾಟ ಮಾಡಿದ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿತ್ತು. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೂ ಇಂತಹ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ ಎಂದು ದೂರಿದರು.
ಯುಜಿಸಿ ನಿಯಮಗಳು ಮತ್ತು ವಿಶ್ವವಿದ್ಯಾಲಯದ ಪರೀಕ್ಷಾ ಕೈಪಿಡಿಯ ಮಾನದಂಡಗಳನ್ನು ಉಲ್ಲಂಘಿಸಿ ಖಾಸಗಿ ಸಂಸ್ಥೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಸಿಸಿಟಿವಿ ಕಣ್ಗಾವಲು ಸೇರಿದಂತೆ ಅಗತ್ಯ ನಿಯಮಗಳನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ. ಪ್ರಸ್ತುತ 25ರಿಂದ 35 ಸಾವಿರದಷ್ಟಿರುವ ಪ್ರವೇಶಾತಿಗೆ ಹೋಲಿಸಿದರೆ ಪರೀಕ್ಷಾ ಕೇಂದ್ರಗಳ ಸಂಖ್ಯೆ 78ರಿಂದ 81ಕ್ಕೆ ಏರಿಕೆಯಾಗಿರುವುದೂ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು.
ಪರೀಕ್ಷಾ ಕೇಂದ್ರಗಳ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಹಣಕಾಸಿನ ಅವ್ಯವಹಾರ ನಡೆದಿರುವ ಶಂಕೆಯಿದ್ದು, ಪರೀಕ್ಷಾಂಗ ಕುಲಸಚಿವರು, ಸಂಬಂಧಪಟ್ಟ ಡೀನ್ಗಳು ಹಾಗೂ ಅಧಿಕಾರಿಗಳ ಪಾತ್ರದ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ಅಕ್ಕಿ ಬೆಲೆ ಏರಿಕೆಯ ಹಿಂದಿನ ಆಟ ಯಾರದ್ದು?: ಕಾರ್ಪೋರೇಟ್ ಮಾರುಕಟ್ಟೆಯ ಕರಾಮತ್ತು!
ನಿಯಮಬದ್ಧವಾಗಿ ಓದಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ನಕಲು ಮೂಲಕ ಹೆಚ್ಚಿನ ಅಂಕ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. 2027ರಲ್ಲಿ ನಡೆಯಲಿರುವ ನ್ಯಾಕ್ ಮೌಲ್ಯಮಾಪನ ಮತ್ತು 2028ರ ಯುಜಿಸಿ ಮಾನ್ಯತೆಯ ದೃಷ್ಟಿಯಿಂದ ವಿಶ್ವವಿದ್ಯಾಲಯವು ಪರೀಕ್ಷಾ ವ್ಯವಸ್ಥೆಯನ್ನು ತಕ್ಷಣ ಸುಧಾರಿಸಬೇಕು ಎಂದು ಆಗ್ರಹಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ಅಕ್ಕಿ ಬೆಲೆ ಏರಿಕೆಯ ಬಿಸಿ: ಗ್ರಾಹಕರ ಕೈ ಸುಡುತ್ತಿದೆ, ಆಹಾರ ಭದ್ರತೆಗೆ ಎದುರಾಗಿದೆ ಸವಾಲು!
ರಾಜ್ಯಪಾಲರು ಹಾಗೂ ಕರಾಮುವಿ ಕುಲಾಧಿಪತಿಗಳು ಮತ್ತು ರಾಜ್ಯ ಸರ್ಕಾರ ಈ ಗಂಭೀರ ಆರೋಪಗಳನ್ನು ಪರಿಗಣಿಸಿ, ಪರೀಕ್ಷಾ ಕೇಂದ್ರಗಳ ಅನುಮತಿ, ಪ್ರಶ್ನೆಪತ್ರಿಕೆಗಳ ನಿರ್ವಹಣೆ ಮತ್ತು ಪರೀಕ್ಷಾ ಅಕ್ರಮಗಳ ಕುರಿತು ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.




