ದೇಹದಾನ, ಅಂಗದಾನ ಮತ್ತು ಚರ್ಮದಾನವು ಮಾನವೀಯತೆಯ ಅತ್ಯುನ್ನತ ಸೇವೆಯಾಗಿದ್ದು, ಒಬ್ಬ ವ್ಯಕ್ತಿಯ ದಾನ ಅನೇಕ ಜೀವಗಳಿಗೆ ಹೊಸ ಬದುಕು ನೀಡಬಲ್ಲದು ಎಂದು ಕೆಎಂಸಿ ಮಣಿಪಾಲದ ಅನಾಟಮಿ ವಿಭಾಗದ ಸಹ ಪ್ರಾಧ್ಯಾಪಕರೂ, ಬಾಡಿ ಡೊನೇಷನ್ ಪ್ರೋಗ್ರಾಂ ಸಂಯೋಜಕರೂ ಆಗಿರುವ ಡಾ ಆರ್ ಹುಬನ್ ಥಾಮಸ್ ಹೇಳಿದರು.
ಅವರು ಸೋಮವಾರ ಸಂಜೆ ಮಣಿಪಾಲದ ರೋಟರಿ ಸಭಾಂಗಣದಲ್ಲಿ ನಡೆದ “ದೇಹ, ಅಂಗ ಮತ್ತು ಚರ್ಮ ದಾನ” ಕುರಿತ ಜಾಗೃತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮವನ್ನು ರೋಟರಿ ಕ್ಲಬ್ ಮಣಿಪಾಲ, ಇನ್ನರ್ ವೀಲ್ ಕ್ಲಬ್ ಉಡುಪಿ ಹಾಗೂ ಪಡುಬಿದ್ರಿಯ ಸುಧಾ ಎಸ್ ಶೆಟ್ಟಿ ಅವರ ಕುಟುಂಬದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಉಪನ್ಯಾಸದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣದಲ್ಲಿ ದೇಹದಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಮಾನವ ದೇಹದ ರಚನೆ ಮತ್ತು ಕಾರ್ಯವೈಖರಿಯನ್ನು ಆಳವಾಗಿ ತಿಳಿದುಕೊಳ್ಳಲು ದೇಹದಾನ ಅತ್ಯಗತ್ಯವಾಗಿದೆ ಎಂದರು. ಸಮಾಜದಲ್ಲಿ ಇನ್ನೂ ದೇಹದಾನ ಮತ್ತು ಅಂಗದಾನ ಕುರಿತು ಹಲವು ತಪ್ಪು ಕಲ್ಪನೆಗಳು ಹಾಗೂ ಭಯಗಳಿದ್ದು, ಅವುಗಳನ್ನು ನಿವಾರಿಸಲು ನಿರಂತರ ಜಾಗೃತಿ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಹೇಳಿದರು.
ಅಂಗದಾನದಿಂದ ಹೃದಯ, ಯಕೃತ್ತು, ಮೂತ್ರಪಿಂಡ ಸೇರಿದಂತೆ ಹಲವು ಅಂಗಗಳನ್ನು ಅಗತ್ಯವಿರುವ ರೋಗಿಗಳಿಗೆ ನೀಡುವ ಮೂಲಕ ಅವರ ಜೀವ ಉಳಿಸಬಹುದು. ಅದೇ ರೀತಿ ಚರ್ಮದಾನವು ಅಗ್ನಿದುರಂತ ಅಥವಾ ಗಂಭೀರ ಗಾಯಗಳಿಂದ ಬಳಲುವವರಿಗೆ ಚಿಕಿತ್ಸೆಯಲ್ಲಿ ಬಹಳ ಸಹಾಯಕವಾಗುತ್ತದೆ ಎಂದು ವಿವರಿಸಿದರು.
ದೇಹದಾನ ಮತ್ತು ಅಂಗದಾನವು ಕೇವಲ ವೈದ್ಯಕೀಯ ಸೇವೆಯಲ್ಲ, ಅದು ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ. ಮರಣಾನಂತರವೂ ಸಮಾಜಕ್ಕೆ ಉಪಯೋಗವಾಗುವ ಕಾರ್ಯವನ್ನು ಪ್ರತಿಯೊಬ್ಬರೂ ಪರಿಗಣಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷೆ ಶಶಿಕಲಾ ರವಿವರ್ಮ ವಹಿಸಿ ಮಾತನಾಡಿ, ಸಮಾಜದಲ್ಲಿ ಸೇವಾ ಮನೋಭಾವ ಬೆಳೆಸುವಲ್ಲಿ ರೋಟರಿ ಮತ್ತು ಇನರ್‌ವೀಲ್ ಸಂಘಟನೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಅಂಗದಾನ ಕುರಿತ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಪಡುಬಿದ್ರಿಯ ಸುಧಾ ಎಸ್ ಶೆಟ್ಟಿ ಅವರ ಕುಟುಂಬದ ಪರವಾಗಿ ಉಷಾ ಶೆಟ್ಟಿಯವರು ಮಾಹಿತಿಯನ್ನು ಹಂಚಿಕೊಂಡರು.
ಇನ್ನರ್ ವೀಲ್ ಕ್ಲಬ್ ಉಡುಪಿ ಅಧ್ಯಕ್ಷೆ ಶಾಲಿನಿ ರಾಘವೇಂದ್ರ, ಕಾರ್ಯದರ್ಶಿ ಶೈಲಾ ಆರ್ ಮಯ್ಯ, ರೋಟರಿ ಕ್ಲಬ್ ಉಡುಪಿ ಕಾರ್ಯದರ್ಶಿ ವಾಣಿಶ್ರೀ, ದೀಪಾ ಭಂಡಾರಿ, ನೌಶಾ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೋಟರಿ ಹಾಗೂ ಇನರ್‌ವೀಲ್ ಸದಸ್ಯರು, ವೈದ್ಯಕೀಯ ಕ್ಷೇತ್ರದ ಆಸಕ್ತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಉಪನ್ಯಾಸದ ಪ್ರಯೋಜನ ಪಡೆದರು.





