ಕಬ್ಬು ಬೆಳೆಗಾರರ ನ್ಯಾಯಯುತ ಹಕ್ಕೊತ್ತಾಯಗಳನ್ನು ಈಡೇರಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ನೇತೃತ್ವದಲ್ಲಿ ರೈತರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು. ರಾಜ್ಯ ಸರ್ಕಾರ ಕೂಡಲೇ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಘೋಷಿಸಬೇಕು ಹಾಗೂ ತಮಿಳುನಾಡು ಮಾದರಿಯಲ್ಲಿ ಪ್ರೋತ್ಸಾಹಧನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದರೆ ನವೆಂಬರ್ 6ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಬೃಹತ್ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕಳೆದ ಒಂದು ತಿಂಗಳಿನಿಂದ ಲಕ್ಷಾಂತರ ಕಬ್ಬು ಬೆಳೆಗಾರರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅರ್ಥಪೂರ್ಣ ಪರಿಹಾರ ನೀಡದೆ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿವೆ. ಕಟಾವಿಗೆ ಸಿದ್ಧವಾಗಿರುವ ಕಬ್ಬು ಒಣಗುವುದನ್ನು ಎದುರು ನೋಡುತ್ತಾ ರೈತರ ಹೋರಾಟವನ್ನು ಹತಾಶೆಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಬೆಳಗಾವಿಯಲ್ಲಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎರಡು ದಿನಗಳಲ್ಲಿ ಕಬ್ಬಿನ ಖರೀದಿ ದರ ನಿಗದಿಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಒಂದು ವಾರ ಕಳೆದರೂ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರಿಂದ ಕಡಿಮೆ ದರಕ್ಕೆ ಕಬ್ಬು ಖರೀದಿಸಿ, ಸಕ್ಕರೆ ಮತ್ತು ಉಪ ಉತ್ಪನ್ನಗಳ ಮಾರಾಟದಿಂದ ಕೋಟ್ಯಂತರ ರೂಪಾಯಿ ಲಾಭ ಗಳಿಸುತ್ತಿರುವ ಕಾರ್ಖಾನೆ ಮಾಲೀಕರಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡುವ ಬದಲು ಅವರ ಒತ್ತಡಕ್ಕೆ ಮಣಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸಗೊಬ್ಬರ, ಕಟಾವು ಮತ್ತು ಸಾಗಣೆ ವೆಚ್ಚ ಸೇರಿದಂತೆ ಕಬ್ಬು ಬೆಳೆಯುವ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಆದರೆ, ಅದಕ್ಕೆ ಅನುಗುಣವಾಗಿ ಕಬ್ಬಿನ ಖರೀದಿ ದರ ಹೆಚ್ಚಳವಾಗುತ್ತಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರದ ಬೆಲೆ ಆಯೋಗ ತಿಳಿಸಿರುವ ಉತ್ಪಾದನಾ ವೆಚ್ಚದ ಆಧಾರದಲ್ಲಿ ಶೇ.50ರಷ್ಟು ಲಾಭಾಂಶ ಸೇರಿಸಿ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಕಬ್ಬು ಬೆಳೆಗಾರರ ಹೋರಾಟದ ಪ್ರಮುಖ ಬೇಡಿಕೆಗಳು:
- ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ನಿಗದಿಗೆ ರಾಜ್ಯ ಬೆಲೆ ಆಯೋಗ ತಿಳಿಸಿರುವ ಉತ್ಪಾದನಾ ವೆಚ್ಚದ ಮೇಲೆ ಶೇ.50ರಷ್ಟು ಲಾಭಾಂಶ ಸೇರಿಸಬೇಕು.
- ಎಫ್‌ಆರ್‌ಪಿ ನಿಗದಿಗೆ ಪ್ರಸ್ತುತ ಪರಿಗಣಿಸುತ್ತಿರುವ ಶೇ.10.25ರ ಸಕ್ಕರೆ ಇಳುವರಿ ಬದಲಿಗೆ ಶೇ.9.5 ಅನ್ನು ಮೂಲ ಮಾನದಂಡವಾಗಿ ಪರಿಗಣಿಸಬೇಕು.
- ಸಕ್ಕರೆ ಮತ್ತು ಎಲ್ಲ ಉಪ ಉತ್ಪನ್ನಗಳಿಂದ ಕಾರ್ಖಾನೆಗಳು ಗಳಿಸುವ ಲಾಭವನ್ನು ಪರಿಗಣಿಸಿ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ನಿಗದಿಪಡಿಸಬೇಕು.
- ಎಫ್‌ಆರ್‌ಪಿ ಪಾವತಿಸಿದ ನಂತರ ಉಪ ಉತ್ಪನ್ನಗಳಿಂದ ಬರುವ ಲಾಭಾಂಶದಲ್ಲಿ ಕನಿಷ್ಠ ಶೇ.50ರಷ್ಟನ್ನು ಕಬ್ಬು ಬೆಳೆಗಾರರಿಗೆ ವರ್ಗಾಯಿಸಬೇಕು.
- ಪೆಟ್ರೋಲಿಯಂ ಕಂಪನಿಗಳು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಅನುಕೂಲವಾಗುವಂತೆ ರೂಪಿಸಿರುವ ಎಥನಾಲ್ ನೀತಿಯನ್ನು ಬದಲಾಯಿಸಬೇಕು.
- ಕಬ್ಬು ನಿಯಂತ್ರಣ ಆದೇಶ–1966 ಅನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ರೈತಪರವಾಗಿ ಮತ್ತಷ್ಟು ಬಲಪಡಿಸಬೇಕು.
ಡಾ. ರಮೇಶ್ ಚಂದ್ ಸಮಿತಿಯ ಹೆಸರಿನಲ್ಲಿ ಕಾಲಹರಣ ಮಾಡದೆ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ಎಫ್‌ಆರ್‌ಪಿ ನಿಗದಿಪಡಿಸುವ ಮಾನದಂಡವನ್ನು ರಾಜ್ಯದ ಕಬ್ಬು ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರು ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸುತ್ತಿದ್ದರೂ ರಾಜ್ಯದವರೇ ಆದ ಕೇಂದ್ರ ಆಹಾರ ಸಚಿವರು ಸೇರಿದಂತೆ ಸಂಸದರು ಮೌನ ವಹಿಸಿರುವುದು ಖಂಡನೀಯ. ರೈತರ ಹೋರಾಟಕ್ಕೆ ಪಕ್ಷಾತೀತವಾಗಿ ರಾಜ್ಯದ ಜನತೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಈ ವಿಶೇಷ ವರದಿ ಓದಿದ್ದೀರಾ? ಕಬ್ಬು ಬೆಳೆಗಾರರ ಬದುಕಿಗೆ ಸಿಹಿಯಾಗದ ಕಬ್ಬಿನ ಬೆಲೆ!
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಮನ್ವಯ ಸಮಿತಿಯಲ್ಲಿ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಅಖಂಡ ಕರ್ನಾಟಕ ರಾಜ್ಯ ರೈತ ಸಂಘಗಳು ಒಗ್ಗೂಡಿ ಹೋರಾಟ ನಡೆಸುತ್ತಿವೆ.
ಈ ವಿಶೇಷ ವರದಿ ಓದಿದ್ದೀರಾ? ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ವಿಭಾಗೀಯ ಸಂಘಟನಾ ಸಂಚಾಲಕ ಹೊಸಕೋಟೆ ಬಸವರಾಜು, ಸಮನ್ವಯ ಸಮಿತಿ ಸದಸ್ಯ ಹಳ್ಳಿಕೆರೆಹುಂಡಿ ಭಾಗ್ಯರಾಜ್, ರೈತ ಮುಖಂಡ ಮಂಜು ಕಿರಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಸೇರಿದಂತೆ ನೂರಾರು ರೈತ ಕಾರ್ಯಕರ್ತರು ಭಾಗವಹಿಸಿದ್ದರು.




