ಪ್ರಯಾಣಿಕರಿಂದ ತುಂಬಿದ್ದ ಎರಡು ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳ ನಡುವೆ ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆ ಡಿಕ್ಕಿಗೆ ತಿರುಗಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಸೋಮವಾರ (ಜು.27) ಬೆಳಿಗ್ಗೆ ಕಾಪು ಬಸ್ ನಿಲ್ದಾಣದಲ್ಲಿ ನಡೆದಿದೆ. ಈ ಸಂಬಂಧ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಕಾಪು ಸರ್ವಿಸ್ ರಸ್ತೆಯಲ್ಲಿರುವ ಹೊಸ ಮಾರಿಗುಡಿ ಅಂಡರ್‌ಪಾಸ್ ಸಮೀಪದ ಬಸ್ ನಿಲ್ದಾಣದ ಎದುರು ಬೆಳಿಗ್ಗೆ ಸುಮಾರು 9.30ಕ್ಕೆ ಘಟನೆ ನಡೆದಿದೆ. ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಸಂದೇಶ್ ಟ್ರಾವೆಲ್ಸ್ ಬಸ್ ಪ್ರಯಾಣಿಕರನ್ನು ಹತ್ತಿಸಲು ಮತ್ತು ಇಳಿಸಲು ನಿಂತಿದ್ದ ವೇಳೆ, ಹಿಂದಿನಿಂದ ಬಂದ ಆನಂದ್ ಟ್ರಾವೆಲ್ಸ್ ಬಸ್ ಅದರ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.
ಉದ್ಯಾವರದಿಂದಲೇ ಎರಡು ಬಸ್‌ಗಳ ಚಾಲಕರು ಮತ್ತು ನಿರ್ವಾಹಕರ ನಡುವೆ ಟೈಮಿಂಗ್ ವಿಚಾರಕ್ಕೆ ವಾಗ್ವಾದ ಆರಂಭವಾಗಿದ್ದು, ಕಾಪುವಿನಲ್ಲಿ ಅದು ತಾರಕಕ್ಕೇರಿ ಪರಸ್ಪರ ಬಸ್‌ಗಳನ್ನು ತಾಗಿಸಿಕೊಳ್ಳುವುದು, ದೂಡಾಟ ನಡೆಸುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳುವ ಮಟ್ಟಕ್ಕೆ ತಲುಪಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದು ಆತಂಕಕ್ಕೊಳಗಾದರು.
ಘಟನೆಯ ಬಳಿಕ ಎರಡೂ ಬಸ್‌ಗಳನ್ನು ರಸ್ತೆಯಲ್ಲೇ ಅಡ್ಡ ನಿಲ್ಲಿಸಿ ಚಾಲಕರು ಮತ್ತು ನಿರ್ವಾಹಕರು ಪರಸ್ಪರ ದೋಷಾರೋಪಣೆ ಮುಂದುವರಿಸಿದ್ದರಿಂದ ಸುಮಾರು 15 ನಿಮಿಷಗಳ ಕಾಲ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸಾರ್ವಜನಿಕರು ಹಾಗೂ ಆಟೋ ಚಾಲಕರು ಮನವಿ ಮಾಡಿದರೂ ಸಿಬ್ಬಂದಿ ಸ್ಥಳದಿಂದ ತೆರಳದ ಕಾರಣ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಗಂಭೀರವಾಯಿತು.
ಸ್ಥಳೀಯರ ಮಾಹಿತಿ ಮೇರೆಗೆ ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿ ಎರಡೂ ಬಸ್‌ಗಳನ್ನು ಠಾಣೆಗೆ ಕೊಂಡೊಯ್ದರು.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕರಾದ ರಮೇಶ್ ಮತ್ತು ಅಭಿಷೇಕ್, ನಿರ್ವಾಹಕರಾದ ವಿಜಯಕುಮಾರ್ ಹಾಗೂ ಹರೀಶ್ ಬಿ. ಹೆಗ್ಡೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದ ಎರಡು ಬಸ್‌ಗಳನ್ನೂ ವಶಪಡಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.







