ಉಡುಪಿ ನಗರದ ಸಂತೆಕಟ್ಟೆ ಪ್ರದೇಶದಲ್ಲಿ ನಿರ್ಮಾಣಗೊಂಡ ಬಹು ನಿರೀಕ್ಷಿತ ಮೇಲ್ಸೇತುವೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಅಧಿಕೃತವಾಗಿ ಬಿಡುಗಡೆಗೊಳಿಸುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದರು. ಈ ಮೂಲಕ ಹಲವು ವರ್ಷಗಳಿಂದ ಸಮಸ್ಯೆಯಾಗಿದ್ದ ಸಂಚಾರ ದಟ್ಟಣೆ ನಿವಾರಣೆಗೆ ಮಾರ್ಗ ಸಿಕ್ಕಂತಾಗಿದೆ.

ಸಂತೆಕಟ್ಟೆ ಪ್ರದೇಶದಲ್ಲಿ ಈಗಾಗಲೇ ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಂಡಿದ್ದು, ಇದೀಗ ಮೇಲ್ಸೇತುವೆಯೂ ಆರಂಭಗೊಂಡಿರುವುದರಿಂದ ಉಡುಪಿ–ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಸಂಚಾರ ಸುಗಮಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ. ವಿಶೇಷವಾಗಿ ಪೀಕ್ ಅವಧಿಯಲ್ಲಿ ಉಂಟಾಗುತ್ತಿದ್ದ ವಾಹನ ದಟ್ಟಣೆ ಹಾಗೂ ಅಪಘಾತಗಳ ಪ್ರಮಾಣ ಇಳಿಕೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಈಗ ತುರ್ತಾಗಿ ಜನರಿಗೆ ಅನುಕೂಲವಾಗಲಿ ಎಂದು ಈ ಮೇಲ್ಸೇತುವೆ ಬಿಡುಗಡೆ ಮಾಡಿದ್ದೇವೆ. ಒಂದಿಷ್ಟು ಟೀಕೆಗಳು ಟಿಪ್ಪಣಿಗಳು ಬಂದದ್ದು ಪ್ರಜಾಪ್ರಭುತ್ವದಲ್ಲಿ ಟೀಕೆ-ಟಿಪ್ಪಣಿಗಳು ಸಹಜವಾಗಿದ್ದು, ಜನರ ಟೀಕೆಗಳಿಂದಲೇ ಕಾಮಗಾರಿ ವೇಗವಾಗಿ ಪೂರ್ಣಗೊಳ್ಳಲು ಸಹಕಾರಿಯಾಯಿತು ಎಂದು ಅಭಿಪ್ರಾಯಪಟ್ಟರು. 2022ರಲ್ಲಿ ಪ್ರಾರಂಭವಾದ ಈ ಯೋಜನೆ ಅನೇಕ ಅಡೆತಡೆಗಳನ್ನು ಎದುರಿಸಿದರೂ, ಕೊನೆಗೂ ಇದೀಗ ಸಾರ್ವಜನಿಕರಿಗೆ ವಾಹನ ಸಂಚರಿಸಲು ಅಧೀಕೃತವಾಗಿ ಮುಕ್ತಗೊಳಿಸಲಾಗಿದೆ ಬಾಕಿ ಇರುವ ಸಣ್ಣ ಪುಟ್ಟ ಕೆಲಸಗಳು ಮುಕ್ತಾಯವಾದ ನಂತರ ಉಡುಪಿ ಶಾಸಕರಾದ ಯಶ್ಫಾಲ್ ಸುವರ್ಣ ಜೊತೆಯಲ್ಲಿ ಒಂದು ಸಮಾರಂಭ ಮಾಡಿ ಅಧಿಕೃತವಾಗಿ ಉದ್ಘಾಟನೆ ಮಾಡುತ್ತೇವೆ ಎಂದು ತಿಳಿಸಿದರು. ಕಾಮಗಾರಿ ವೇಳೆ ಭೂಗರ್ಭದಲ್ಲಿ ಬಂಡೆ ಸಿಕ್ಕಿದ್ದರಿಂದ ನಿರ್ಮಾಣದಲ್ಲಿ ವಿಳಂಬ ಉಂಟಾಯಿತು. ಈ ಹಿನ್ನಲೆಯಲ್ಲಿ ಯೋಜನೆ ಸಮಯಕ್ಕೆ ಪೂರ್ಣಗೊಳ್ಳದಿದ್ದರೂ, ಸಹನೆ ತೋರಿದ ಸಾರ್ವಜನಿಕರು ಹಾಗೂ ಸಲಹೆ-ಟೀಕೆಗಳ ಮೂಲಕ ಗಮನಸೆಳೆದ ಎಲ್ಲರಿಗೂ ಸಂಸದರು ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂತೆಕಟ್ಟೆ ಭಾಗದಲ್ಲಿ ನಡೆಯುತ್ತಿದ್ದ ಕಾಮಗಾರಿ ಅವಧಿಯಲ್ಲಿ ಅನೇಕ ಸಮಸ್ಯೆಗಳು ಎದುರಾಗಿದ್ದವು. ಸೂಚನಾ ಫಲಕಗಳ ಕೊರತೆ, ಸರಿಯಾದ ಸರ್ವಿಸ್ ರಸ್ತೆ ವ್ಯವಸ್ಥೆಯಿಲ್ಲದಿರುವುದು, ಬಸ್ ನಿಲ್ದಾಣದ ಅಸೌಕರ್ಯ, ರಸ್ತೆ ದಾಟಲು ಸುರಕ್ಷಿತ ವ್ಯವಸ್ಥೆಗಳ ಅಭಾವ ಸೇರಿದಂತೆ ಹಲವು ಅಂಶಗಳ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಕಳೆದ ಆರು ವರ್ಷಗಳಲ್ಲಿ ನೂರಾರು ಅಪಘಾತಗಳು ಸಂಭವಿಸಿ ಹಲವು ಜೀವಹಾನಿ ಉಂಟಾಗಿರುವುದೂ ಗಮನಾರ್ಹವಾಗಿದೆ.

ಈ ಸಮಸ್ಯೆಗಳ ವಿರುದ್ಧ ಕಲ್ಯಾಣಪುರ-ಸಂತೆಕಟ್ಟೆ ನಾಗರಿಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸ್ಥಳೀಯರು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ಹಾಗೂ ರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಎಲ್ಲಾ ಹಿನ್ನಲೆಯಲ್ಲಿ ಇದೀಗ ಮೇಲ್ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತಗೊಂಡಿರುವುದು ಸ್ಥಳೀಯರಿಗೆ ಸ್ವಲ್ಪ ಮಟ್ಟಿನ ನಿರಾಳತೆ ನೀಡಿದಂತಾಗಿದೆ. ಆದಾಗ್ಯೂ, ಉಳಿದ ಮೂಲಭೂತ ಸೌಲಭ್ಯಗಳನ್ನು ಶೀಘ್ರ ಪೂರ್ಣಗೊಳಿಸುವುದು ಅಗತ್ಯ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




