ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಕ್ರಮಾಂಕ 208/2025ರ ಕೋಕಾ ಕಾಯ್ದೆ ಪ್ರಕರಣದ ಇಬ್ಬರು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ಆರೋಪಿಗಳಾದ ಮನೋಜ್ ಕುಲಾಲ್ @ ಮನೋಜ್ ಕೋಡಿಕೆರೆ ಹಾಗೂ ಚೇತನ್ @ ಚೇತು ಪಡೀಲ್ ಅವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದ್ದು, ಮಾಹಿತಿ ನೀಡುವವರಿಗೆ ₹50,000 ನಗದು ಬಹುಮಾನ ಘೋಷಿಸಲಾಗಿತ್ತು.
ಸಾರ್ವಜನಿಕರಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಆರೋಪಿ ಚೇತನ್ @ ಚೇತು ಪಡೀಲ್ ಅವರನ್ನು ಏಪ್ರಿಲ್ 30 ರಂದು ಹಾಗೂ ಮನೋಜ್ ಕುಲಾಲ್ @ ಮನೋಜ್ ಕೋಡಿಕೆರೆ ಅವರನ್ನು ಜೂನ್ 11 ರಂದು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಆರೋಪಿಗಳಲ್ಲಿ ಮನೋಜ್ ಕೋಡಿಕೆರೆ ಈತನ ವಿರುದ್ಧ ಉಡುಪಿ ಜಿಲ್ಲೆಯಲ್ಲಿ 2 ಮತ್ತು ಮಂಗಳೂರು ನಗರದಲ್ಲಿ 17 ಪ್ರಕರಣಗಳು, ಒಟ್ಟು 19 ಪ್ರಕರಣ ಗಳು ದಾಖಲಾಗಿದ್ದು, 3 ಕೊಲೆ ಪ್ರಕರಣ, 5 ಕೊಲೆ ಪ್ರಯತ್ನ ಪ್ರಕರಣ, 1 ಅಪಹರಣ ಪ್ರಕರಣ, 10 ಹಲ್ಲೆ ಮತ್ತು ದೊಂಬಿ ಪ್ರಕರಣಗಳು ದಾಖಲಾಲಾಗಿರುತ್ತದೆ.
ಆರೋಪಿ ಚೇತನ್ ವಿರುದ್ಧ ಉಡುಪಿ-2, ದಕ್ಷಿಣ ಕನ್ನಡ -2 ಮತ್ತು ಮಂಗಳೂರು ನಗರ-9 ಪ್ರಕರಣಗಳು ಸೇರಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗಿದ್ದು, 2 ಕೊಲೆ, 2 ಕೊಲೆ ಪ್ರಯತ್ನ ಪ್ರಕರಣ, 1 ಅಪಹರಣ ಪ್ರಕರಣ, 2 ಮಾದಕ ದ್ರವ್ಯ ಸೇವನೆ ಮತ್ತು 6 ಹಲ್ಲೆ ಮತ್ತು ದೊಂಬಿ ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿಗಳ ಬಂಧನಕ್ಕೆ ನೆರವಾದ ಮಾಹಿತಿದಾರರಿಗೆ ಪೊಲೀಸ್ ಇಲಾಖೆಯಿಂದ ಘೋಷಿತ ನಗದು ಬಹುಮಾನವನ್ನು ನೀಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಸಮಾಜದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಹಾಗೂ ಅಪರಾಧಿಗಳನ್ನು ಪತ್ತೆಹಚ್ಚಲು ಸಾರ್ವಜನಿಕರು ಇದೇ ರೀತಿ ಮುಂದೆಯೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಮಾಹಿತಿ ನೀಡುವಂತೆ ಇಲಾಖೆ ಮನವಿ ಮಾಡಿದೆ.






