ಉಡುಪಿ ಜಿಲ್ಲಾ ಬಿಜೆಪಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ ವಿದ್ಯಾರ್ಥಿಗಳನ್ನು ಭಯೋತ್ಪಾದಕರು ಹಾಗೂ ದೇಶದ್ರೋಹಿಗಳಂತೆ ಬಿಂಬಿಸಿರುವುದು ಖಂಡನೀಯ. ಹಾಗಾಗಿ ಅವರು ವಿದ್ಯಾರ್ಥಿಗಳಲ್ಲಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ನವೀನ್ ಸಾಲಿಯಾನ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ದೇಶಾದ್ಯಂತ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಲಕ್ಷಾಂತರ ವಿದ್ಯಾರ್ಥಿಗಳು ಸುಮಾರು ಒಂದು ತಿಂಗಳಿಗೂ ಅಧಿಕವಾಗಿ ದೇಶದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಿದ್ದು, ಅದರ ಪರಿಣಾಮವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಉಂಟಾಯಿತು. ಇದರಿಂದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಯಿತು” ಎಂದರು.
“ಅಲ್ಲದೆ, ನೀಟ್ ಪರೀಕ್ಷೆಯಲ್ಲಿನ ಅವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿಕೊಂಡಿದ್ದು, ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದರ ಜತೆಗೆ, ಮುಂದಿನ ದಿನಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಸಂಸತ್ತಿನಲ್ಲಿ ಕಠಿಣ ಕಾನೂನು ಜಾರಿಗೊಳಿಸಿದೆ” ಎಂದು ಹೇಳಿದ್ದಾರೆ.
“ಇಷ್ಟೆಲ್ಲ ಬೆಳವಣಿಗೆಗಳಾಗಿದ್ದರೂ ಉಡುಪಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸುತ್ತಿರುವುದು ಆಶ್ಚರ್ಯಕರವಾಗಿದೆ. ಕೇಂದ್ರ ಸರ್ಕಾರವೇ ತನ್ನ ತಪ್ಪನ್ನು ಅರಿತು ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕ್ರಮ ಕೈಗೊಂಡಿದ್ದರೂ, ಉಡುಪಿ ಬಿಜೆಪಿ ನಾಯಕರು ವಿದ್ಯಾರ್ಥಿ ಹೋರಾಟವನ್ನು ಟೀಕಿಸಿರುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಇತ್ತೀಚೆಗೆ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಉಡುಪಿ ಶಾಸಕ ಸೇರಿದಂತೆ ಜಿಲ್ಲೆಯ ಶಾಸಕರು ಅಸಂಬದ್ಧವಾಗಿ ಮಾತನಾಡಿ, ಇಡೀ ವಿದ್ಯಾರ್ಥಿ ಸಮುದಾಯವನ್ನು ನಿಂದಿಸಿದ್ದಾರೆ. ವಿದ್ಯಾರ್ಥಿಗಳನ್ನು ಭಯೋತ್ಪಾದಕರು ಎಂಬಂತೆ ಬಿಂಬಿಸಿ ಹಿಯ್ಯಾಳಿಸಿರುವುದು ಬಿಜೆಪಿ ಪಕ್ಷಕ್ಕೆ ಶೋಭೆ ತರುವುದಿಲ್ಲ” ಎಂದು ನವೀನ್ ಸಾಲಿಯಾನ್ ಆರೋಪಿಸಿದ್ದಾರೆ.
“ಅಲ್ಲದೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಹಗುರವಾದ ಭಾಷೆಯಲ್ಲಿ ಮಾತನಾಡಿರುವುದನ್ನು ಅವರು ಖಂಡಿಸಿದ್ದಾರೆ. ಇದು ಸಾಂವಿಧಾನಿಕ ಹುದ್ದೆಯಲ್ಲಿರುವ ಯಶ್‌ಪಾಲ್ ಸುವರ್ಣ ಅವರು ಬುದ್ಧಿವಂತರ ಜಿಲ್ಲೆ ಉಡುಪಿಯ ಜನಪ್ರತಿನಿಧಿಯಾಗಿ ಈ ರೀತಿ ಮಾತನಾಡಿರುವುದು ತರವಲ್ಲ” ಎಂದರು.
“2024ರಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣಕ್ಕೆ 2 ವರ್ಷಗಳ ಹಿಂದೆ ಹೊಸ ಕಾಯ್ದೆ ಜಾರಿ ಮಾಡಲಾಯಿತು.ಆದರೆ, ಆಗಿದ್ದೇನು? ಈ ವರ್ಷ ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆಯಾಯಿತು. ವೈಪಲ್ಯ ಎದುರಿಸಿದಾಗಲೆಲ್ಲ ಕಾನೂನು ಬದಲಿಸುವ ಕಲೆಯನ್ನು ಬಿಜೆಪಿ ಸರ್ಕಾರ ರೂಢಿಸಿಕೊಂಡಿದೆ. ನಿಮ್ಮ 12 ವರ್ಷಗಳ ಅಸಮರ್ಥತೆ ಮತ್ತು ವೈಪಲ್ಯವನ್ನು ಈ ಮಸೂದೆ ತೊಡೆದು ಹಾಕಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಒಡೆದುಹೋದ ಕನಸುಗಳನ್ನು ಜೋಡಿಸಲು ಅದಕ್ಕೆ ಸಾದ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಾಸಕ ಯಶ್ಪಾಲ್ ಸುವರ್ಣ ಸಹಿತ ಬಿಜೆಪಿ ನಾಯಕರು ಅಧಿಕಾರದ ಅಮಲಿನ ಹೇಳಿಕೆಗಳನ್ನು ನಿಲ್ಲಿಸಿ : ವೆರೋನಿಕಾ ಕರ್ನೆಲಿಯೋ
“ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾದ ವಿದ್ಯಾರ್ಥಿ ಹೋರಾಟದಲ್ಲಿ ಭಾಗವಹಿಸಿದ್ದವರನ್ನು ದೇಶದ್ರೋಹಿಗಳು ಹಾಗೂ ಭಯೋತ್ಪಾದಕರಂತೆ ಬಿಂಬಿಸಿರುವುದು ಅತ್ಯಂತ ಖಂಡನೀಯ. ಈ ಸಂಬಂಧ ಉಡುಪಿ ಶಾಸಕರು ಶೀಘ್ರ ವಿದ್ಯಾರ್ಥಿಗಳ ಹಾಗೂ ಸಮಸ್ತ ಉಡುಪಿ ಜನತೆಯ ಕ್ಷಮೆ ಕೋರಬೇಕು” ಎಂದು ಆಗ್ರಹಿಸಿದ್ದಾರೆ.







