ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR-2026) ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲೆ ಮಹತ್ವದ ಪ್ರಗತಿ ಸಾಧಿಸಿದ್ದು, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಒಟ್ಟು 10,63,876 ಮತದಾರರ ಎಣಿಕೆ ನಮೂನೆಗಳನ್ನು (Enumeration Forms) ವಿತರಿಸಲಾಗಿದೆ. ಈ ಪೈಕಿ 10,00,545 ನಮೂನೆಗಳು ಡಿಜಿಟಲೀಕರಣಗೊಂಡಿವೆ. ಇದೇ ವೇಳೆ, ವಿವಿಧ ಕಾರಣಗಳಿಂದ ಸಂಗ್ರಹಿಸಲು ಸಾಧ್ಯವಾಗದ ಅಥವಾ ಪರಿಶೀಲನೆಗೆ ಒಳಪಡಬೇಕಾದ ಒಟ್ಟು 63,331 ಮತದಾರರ ದಾಖಲೆಗಳು ಗುರುತಿಸಲ್ಪಟ್ಟಿವೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಆ.18ರ ಮಾಹಿತಿಯಂತೆ, ಬೈಂದೂರು, ಕುಂದಾಪುರ, ಉಡುಪಿ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ SIR ಕಾರ್ಯ ಪ್ರಗತಿ ಸಾಧಿಸಿದೆ. ಜಿಲ್ಲೆಯಾದ್ಯಂತ ವಿತರಿಸಲಾದ 10,63,876 ಎಣಿಕೆ ನಮೂನೆಗಳಲ್ಲಿ ಶೇ.94ಕ್ಕೂ ಅಧಿಕ ನಮೂನೆಗಳು ಈಗಾಗಲೇ ಡಿಜಿಟಲೀಕರಣಗೊಂಡಿರುವುದು ಗಮನಾರ್ಹವಾಗಿದೆ.
63,331 ದಾಖಲೆಗಳು ಪರಿಶೀಲನೆಗೆ
ಡಿಜಿಟಲೀಕರಣಗೊಂಡ ದಾಖಲೆಗಳ ಪರಿಶೀಲನೆಯ ವೇಳೆ ಮರಣ ಹೊಂದಿರುವವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಈಗಾಗಲೇ ಮತ್ತೊಂದು ಕಡೆ ಮತದಾರರಾಗಿ ನೋಂದಾಯಿತರಾಗಿರುವವರು, ಗೈರುಹಾಜರಾಗಿರುವವರು ಹಾಗೂ ಇತರ ಕಾರಣಗಳಿಗೆ ಸಂಬಂಧಿಸಿದಂತೆ ಒಟ್ಟು 63,331 ದಾಖಲೆಗಳನ್ನು ಗುರುತಿಸಲಾಗಿದೆ.
ಇವುಗಳಲ್ಲಿ 21,262 ಮಂದಿ ಮೃತಪಟ್ಟಿರುವ ಸಾಧ್ಯತೆ, 29,361 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 8,374 ಮಂದಿ ಈಗಾಗಲೇ ಮತ್ತೊಂದು ಕಡೆ ನೋಂದಾಯಿತರಾಗಿರುವುದು, 4,145 ಮಂದಿ ಗೈರುಹಾಜರಿರುವುದು ಹಾಗೂ 189 ದಾಖಲೆಗಳು ಇತರ ಕಾರಣಗಳಿಗೆ ಸೇರಿವೆ.

ಯಾವ ಕ್ಷೇತ್ರದಲ್ಲಿ ಎಷ್ಟು?
ಬೈಂದೂರು: 2,41,863 ಮತದಾರರ ಪೈಕಿ 2,27,583 ಎಣಿಕೆ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಒಟ್ಟು 14,280 ದಾಖಲೆಗಳು ಅನ್‌ಕಲೆಕ್ಟಬಲ್ ವಿಭಾಗಕ್ಕೆ ಸೇರಿವೆ.
ಕುಂದಾಪುರ: 2,12,473 ಮತದಾರರ ಪೈಕಿ 2,00,839 ನಮೂನೆಗಳು ಡಿಜಿಟಲೀಕರಣಗೊಂಡಿದ್ದು, ಒಟ್ಟು 11,634 ದಾಖಲೆಗಳು ವಿವಿಧ ಕಾರಣಗಳಿಂದ ಪರಿಶೀಲನೆಗೆ ಒಳಪಟ್ಟಿವೆ.
ಉಡುಪಿ: 2,21,680 ಮತದಾರರ ಪೈಕಿ 2,03,954 ನಮೂನೆಗಳು ಡಿಜಿಟಲೀಕರಣಗೊಂಡಿವೆ. ಈ ಕ್ಷೇತ್ರದಲ್ಲಿ ಅನ್‌ಕಲೆಕ್ಟಬಲ್ ದಾಖಲೆಗಳ ಸಂಖ್ಯೆ 17,726 ಆಗಿದೆ.
ಕಾಪು: 1,94,718 ಮತದಾರರ ಪೈಕಿ 1,84,684 ನಮೂನೆಗಳು ಡಿಜಿಟಲೀಕರಣಗೊಂಡಿದ್ದು, 10,034 ದಾಖಲೆಗಳು ವಿವಿಧ ಕಾರಣಗಳಿಂದ ಸಂಗ್ರಹಿಸಲಾಗದ ಪಟ್ಟಿಯಲ್ಲಿವೆ.
ಕಾರ್ಕಳ: 1,93,142 ಮತದಾರರ ಪೈಕಿ 1,83,485 ನಮೂನೆಗಳು ಡಿಜಿಟಲೀಕರಣಗೊಂಡಿವೆ. ಇಲ್ಲಿ 9,657 ದಾಖಲೆಗಳು ಅನ್‌ಕಲೆಕ್ಟಬಲ್ ವಿಭಾಗದಲ್ಲಿವೆ.





