ನಾಗರ ಪಂಚಮಿ ಹಬ್ಬದ ಸಂಭ್ರಮದಲ್ಲಿ ಎಲ್ಲೆಡೆ ನಾಗರ ಮೂರ್ತಿಗೆ ಪೂಜೆ ಸಲ್ಲಿಸಿ ಹಾಲೆರೆಯುತ್ತಿದ್ದರೆ, ರಾಯಬಾಗ ಪಟ್ಟಣದ ಬಡ ಕುಟುಂಬವೊಂದರಲ್ಲಿ ಮಾತ್ರ ಹಬ್ಬದ ದಿನವೇ ಸಾವಿನ ಸೂತಕ ಆವರಿಸಿದೆ.
ಹೊಲದಲ್ಲಿ ಕಸ ತೆಗೆಯುತ್ತಿದ್ದ ಮಹಿಳೆಯೊಬ್ಬರಿಗೆ ವಿಷಕಾರಿ ಕೊಳಕು ಮಂಡಲ ಹಾವು ಕಚ್ಚಿ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ರಾಯಬಾಗ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದ ನಿವಾಸಿ ಸತ್ಯವ್ವ ಶಿವಾನಂದ ಶಿಂಗೆ (43) ಎಂದು ಗುರುತಿಸಲಾಗಿದೆ.
ಸತ್ಯವ್ವ ಅವರು ಸೋಮವಾರ ಹೊಲದಲ್ಲಿ ಕಸ ತೆಗೆಯುವ ಕೆಲಸಕ್ಕೆ ತೆರಳಿದ್ದರು. ಕೆಲಸ ಮಾಡುತ್ತಿದ್ದ ವೇಳೆ ಹೊಲದಲ್ಲಿ ಅಡಗಿದ್ದ ವಿಷಕಾರಿ ಹಾವು ಏಕಾಏಕಿ ಕಚ್ಚಿದೆ. ತೀವ್ರ ಅಸ್ವಸ್ಥಗೊಂಡ ಅವರನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.
ಕುಟುಂಬಕ್ಕೆ ಆಧಾರವಾಗಿದ್ದ ಸತ್ಯವ್ವ ಅವರ ಸಾವಿನಿಂದ ಮಕ್ಕಳು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ನಾಗರ ಪಂಚಮಿ ಹಬ್ಬದ ದಿನವೇ ಸಂಭವಿಸಿದ ದುರಂತದಿಂದ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಘಟನೆ ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



