ನಗರದ ಪಶ್ಚಿಮ ಠಾಣೆ, ರಾಯಚೂರು ಗ್ರಾಮೀಣ ಹಾಗೂ ಶಕ್ತಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ನಡೆದಿದ್ದ ಸರಣಿ ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 45.95 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಯಚೂರಿನ ಚಂದ್ರಡಾ ರಸ್ತೆಯ ಆಶ್ರಯ ಕಾಲೊನಿಯ ಅಮರ್ ಸಿಂಗ್ ಅಲಿಯಾಸ್ ಅಮರ್ (29) ಹಾಗೂ ಧನರಾಜ್ ಸಿಂಗ್ ಅಲಿಯಾಸ್ ಧನ್ಯಾ ಬಂಧಿತ ಆರೋಪಿಗಳು.
ಆರೋಪಿಗಳು ರಾಯಚೂರಿನ ಹೊರವಲಯದ ಯರಮರಸ್ ಗ್ರಾಮದಲ್ಲಿ ಜುಲೈ 7ರಂದು, ಶಕ್ತಿನಗರದ ಜನತಾ ಲೇಔಟ್‌ನಲ್ಲಿ ಜುಲೈ 30ರಂದು, ಶಕ್ತಿನಗರದ ಕೆಪಿಸಿ ಕಾಲೋನಿಯಲ್ಲಿ ಸೆಪ್ಟೆಂಬರ್ 18ರಂದು ಹಾಗೂ ರಾಯಚೂರು ನಗರದ ಆಶ್ರಫಿಯಾ ಕಾಲೋನಿಯಲ್ಲಿ ಸೆಪ್ಟೆಂಬರ್ 19ರಂದು ಮತ್ತು ರಾಘವೇಂದ್ರ ಕಾಲೋನಿಯಲ್ಲಿ ಅಕ್ಟೋಬರ್ 20ರಂದು ಮನೆಗಳ ಬೀಗ ಹಾಗೂ ಬಾಗಿಲು ಮುರಿದು ಕಳ್ಳತನ ಮಾಡಿದ್ದರು.
ಐದು ಪ್ರಕರಣಗಳನ್ನು ಬೇಧಿಸಿದ ಪೊಲೀಸರು ನವೆಂಬರ್ 17ರಂದು ಮುಂಜಾನೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳ ಬಾಯಿ ಬಿಟ್ಟಿದ್ದಾರೆ.
ಬಂಧಿತರಿಂದ ಸುಮಾರು 300 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್‌ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಈ ಹಿಂದೆ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದ್ದು ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಗುಗಿರಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಪಮಾನ, ನಿಂದನೆ, ದೌರ್ಜನ್ಯಗಳ ನಡುವೆ ಒಂಟಿ ಮಹಿಳೆಯರ ಬದುಕು; ಮಾಳಮ್ಮ
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಹರೀಶ್ ಹಾಗೂ ಡಿವೈಎಸ್ಪಿ ಈ. ಶಾಂತವೀರ ಅವರ ಮಾರ್ಗದರ್ಶನದಲ್ಲಿ ರಾಯಚೂರು ಗ್ರಾಮೀಣ ವೃತ್ತದ ಸಿಪಿಐ ಎನ್.ಆರ್. ನಿಂಗಪ್ಪ ಶಕ್ತಿನಗರ ಪಿಎಸ್‌ಐ ನಾರಾಯಣ ಹಾಗೂ ಸಿಬ್ಬಂದಿ ಮತ್ತು ಪಶ್ಚಿಮ ವೃತ್ತದ ಸಿಪಿಐ ಉಮೇಶ ಕಾಂಬಳೆ, ಪಶ್ಚಿಮ ಠಾಣೆಯ ಪಿಎಸ್‌ಐ ಟಿ.ಡಿ. ಮಂಜುನಾಥ ಹಾಗೂ ಸಿಬ್ಬಂದಿ ಎರಡು ತಂಡಗಳಾಗಿ ಕಾರ್ಯಾಚರಣೆ ನಡೆಸಿದ್ದರು ಎಂದು ಎಸ್ ಪಿ ತಿಳಿಸಿದರು.


