ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಎಲ್‌ಪಿಜಿ ಬಿಕ್ಕಟ್ಟು ಉಂಟಾಗಿರುವಾಗ ದೇಶದಲ್ಲಿ ಲಾಕ್‌ಡೌನ್ ಆಗಲಿದೆ ಎಂದು ಸುದ್ದಿಗಳು ಹರಿದಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯು ಸುದ್ದಿಗೆ ಪುಷ್ಠಿ ನೀಡಿದೆ. ಈ ನಡುವೆ “ದೇಶದಲ್ಲಿ ಯಾವುದೇ ಲಾಕ್‌ಡೌನ್ ಇಲ್ಲ. ಎಲ್ಲ ವದಂತಿಗಳು ಸುಳ್ಳು” ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಇಂಧನ ಬಿಕ್ಕಟ್ಟಿನ ಕಳವಳದ ನಡುವೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪುರಿ, “ಭಾರತದಲ್ಲಿ ಲಾಕ್‌ಡೌನ್ ವದಂತಿಗಳು ಸಂಪೂರ್ಣವಾಗಿ ಸುಳ್ಳು. ನಾನು ಸ್ಪಷ್ಟವಾಗಿ ಹೇಳುತ್ತೇನೆ. ಭಾರತ ಸರ್ಕಾರವು ಅಂತಹ ಯಾವುದೇ ಪ್ರಸ್ತಾಪವನ್ನು ಪರಿಗಣಿಸುತ್ತಿಲ್ಲ” ಎಂದರು.
ಇದನ್ನು ಓದಿದ್ದೀರಾ? ಇಂಧನ ಬಿಕ್ಕಟ್ಟು: ಪಾಕ್‌ನ ಸರ್ಕಾರಿ ಸ್ವಾಮ್ಯದ ನೌಕರರ ವೇತನದಲ್ಲಿ ಶೇ. 30ರಷ್ಟು ಕಡಿತ
“ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ನಾಗರಿಕರಿಗೆ ಇಂಧನ ಮತ್ತು ಇತರ ನಿರ್ಣಾಯಕ ಸರಬರಾಜುಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಎದುರಾಗುತ್ತಿರುವ ಸವಾಲುಗಳನ್ನು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ. ದೇಶದಲ್ಲಿ ಸಾಕಷ್ಟು ಸರಬರಾಜು ಇದೆ” ಎಂದು ಭರವಸೆ ನೀಡಿದರು.
ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ದಾಳಿ ನಡೆಸಿದ ಬಳಿಕ ದಾಳಿ ಪ್ರತಿದಾಳಿ ನಡೆಯುತ್ತಲೇ ಇದೆ. ತನ್ನ ಹಡಗುಗಳ ಮೇಲೆ ಇಸ್ರೇಲ್, ಅಮೆರಿಕ ದಾಳಿ ನಡೆಸುತ್ತಿದ್ದಂತೆ ತೈಲ ರಫ್ತಿಗೆ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಸಾಗಾಟವನ್ನು ಇರಾನ್ ಬಂದ್ ಮಾಡಿದೆ. ಇದು ಜಾಗತಿಕವಾಗಿ ತೈಲ ಸರಬರಾಜಿಗೆ ಹೊಡೆತ ನೀಡಿದೆ.
ಇದನ್ನು ಓದಿದ್ದೀರಾ? 10-ಮಿನಿಟ್ ಡೆಲಿವರಿ ಸಂಸ್ಕೃತಿ; ʼಕ್ವಿಕ್ ಕಾಮರ್ಸ್ʼ ಒಳಬೇಗುದಿ!
ಈಗಾಗಲೇ ಎಲ್‌ಪಿಜಿ ಸಿಲಿಂಡರ್ ಕೊರತೆಯಿಂದಾಗಿ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಕ್ರಮವಾಗಿ ದುಪ್ಪಟ್ಟು ಹಣಕ್ಕೆ ಸಿಲಿಂಡರ್ ಮಾರಾಟ ದಂಧೆಯೂ ನಡೆಯುತ್ತಿದೆ. ಇವೆಲ್ಲವುದರ ನಡುವೆ ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಜಾಗತಿಕವಾಗಿ ಎದುರಾಗಬಹುದಾದ ದೀರ್ಘಕಾಲದ ಸವಾಲುಗಳನ್ನು ಎದುರಿಸಲು ಭಾರತೀಯರು ಕೋವಿಡ್ ಸಮಯದಲ್ಲಿ ತೋರಿದ ಒಗ್ಗಟ್ಟಿನಂತೆಯೇ ಸಿದ್ಧರಾಗಿರಬೇಕು. ಯುದ್ಧದಿಂದಾಗಿ ತೈಲ ಮತ್ತು ರಸಗೊಬ್ಬರಗಳ ಬೆಲೆಯಲ್ಲಿ ವ್ಯತ್ಯಯ ಉಂಟಾಗಬಹುದು. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಹೇಗೆ ಪರಿಸ್ಥಿತಿಯನ್ನು ನಿಭಾಯಿಸಲಾಯಿತೋ, ಅದೇ ರೀತಿ ಈಗಲೂ ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಈ ಹೇಳಿಕೆಯು ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಲಾಕ್‌ಡೌನ್‌ನಂತೆಯೇ ಸಮಸ್ಯೆ ಉಂಟಾಗಬಹುದು ಎಂದು ಜನರು ಭಾವಿಸಿ ಈಗಲೇ ಅಗತ್ಯಕ್ಕಿಂತ ಅಧಿಕ ಪೆಟ್ರೋಲ್, ಡಿಸೇಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇತರೆ ಅಗತ್ಯ ವಸ್ತುಗಳನ್ನೂ ಹೆಚ್ಚುವರಿ ಖರೀದಿಸುತ್ತಿದ್ದಾರೆ.




