ಉತ್ತರ ಕನ್ನಡ: ಅಂಚೆ ಇಲಾಖೆಯು ಶಾಲಾ ಮಕ್ಕಳಲ್ಲಿ ಅಂಚೆಚೀಟಿ ಸಂಗ್ರಹಣಾ ಕಲೆಯನ್ನು ಉತ್ತೇಜಿಸುವ ಸದುದ್ದೇಶದಿಂದ ಮಹತ್ತ್ವದ ಹೆಜ್ಜೆಯನ್ನಿಟ್ಟಿದೆ. “ದೀನ್ ದಯಾಳ್ ಸ್ಪರ್ಶ ಯೋಜನೆ”ಯಡಿಯಲ್ಲಿ ವಿದ್ಯಾರ್ಥಿವೇತನಕ್ಕಾಗಿ 6ನೇ ತರಗತಿಯಿಂದ 9ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ವಿಶೇಷ ಯೋಜನೆಯ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ಶೇಕಡಾ 60ರಷ್ಟು ಅಂಕಗಳನ್ನು ಹೊಂದಿರಬೇಕು. ಇದರೊಂದಿಗೆ, ಅಂಚೆಚೀಟಿ ಸಂಗ್ರಹಣಾ ಠೇವಣಿ ಖಾತೆ ಅಥವಾ ಅಂಚೆಚೀಟಿ ಸಂಗ್ರಹಣಾ ಕ್ಲಬ್‌ನ ಸದಸ್ಯತ್ವವನ್ನು ಪಡೆದಿರುವುದು ಕಡ್ಡಾಯವಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜನರ ಮನೆ ಬಾಗಿಲಿಗೆ ಜಾತಿ–ಆದಾಯ ಪ್ರಮಾಣಪತ್ರ: 9.60 ಲಕ್ಷ ವಿತರಣೆ, ಶೇ.85.76 ಸಾಧನೆ
ಅಂಚೆಚೀಟಿ ಸಂಗ್ರಹಣಾ ಕಲೆಯನ್ನು ಹವ್ಯಾಸವಾಗಿ ಅನುಸರಿಸುತ್ತಿರುವ 6 ರಿಂದ 9ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ರೂ.6000/- ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಅಂಚೆಚೀಟಿ ಸಂಗ್ರಹಣಾ ರಸಪ್ರಶ್ನೆಯ ಆಧಾರದ ಮೇಲೆ ನಡೆಯಲಿದೆ.
ರಸಪ್ರಶ್ನೆಯಲ್ಲಿ ಶಾರ್ಟ್ಲಿಸ್ಟ್ ಮಾಡಲಾದ ವಿದ್ಯಾರ್ಥಿಗಳು, ಅಂಚೆ ಇಲಾಖೆ ರೂಪಿಸುವ ಅಂಚೆಚೀಟಿ ಸಂಗ್ರಹಣಾ ಯೋಜನೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಬೇಕಾಗುತ್ತದೆ. ಲೆವೆಲ್-1 ಫಿಲಾಟೆಲಿಕ್ ರಸಪ್ರಶ್ನೆಯಲ್ಲಿ ಭಾಗವಹಿಸಲು ಮತ್ತು ಅರ್ಜಿಗಳನ್ನು ಸಲ್ಲಿಸಲು ಅಥವಾ ಪೋಸ್ಟ್ ಮಾಡಲು ಸೆಪ್ಟೆಂಬರ್ 10 ಕೊನೆಯ ದಿನವಾಗಿದೆ.
ಕರ್ನಾಟಕದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು www.indiapost.gov.in ಅಥವಾ https://app.indiapost.gov.in/circleportal/karnataka ವೃತ್ತ ಪೋರ್ಟಲ್‌ಗೆ ಭೇಟಿ ನೀಡಬಹುದು ಎಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕ ಹೂವಪ್ಪ ಜಿ ತಿಳಿಸಿದ್ದು, ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ.




