ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಆ.26ರಂದು ದಿಢೀರ್ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಿಂದ ನೇಪಾಳಕ್ಕೆ ಪ್ರವಾಸ ಅಥವಾ ಇತರೆ ಕಾರಣಗಳಿಗಾಗಿ ತೆರಳಿರುವ ಯಾವುದೇ ಪ್ರವಾಸಿಗರು ಅಥವಾ ನಾಗರಿಕರು ನಾಪತ್ತೆಯಾಗಿರುವುದು, ಪ್ರವಾಹದಲ್ಲಿ ಸಿಲುಕಿಕೊಂಡಿರುವುದು ಅಥವಾ ಪ್ರಸ್ತುತ ಸಂಪರ್ಕಕ್ಕೆ ಸಿಗದಿರುವುದು ಕಂಡುಬಂದಲ್ಲಿ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮನವಿ ಮಾಡಿದೆ.
ಈ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದು, ಸಂಬಂಧಪಟ್ಟ ವ್ಯಕ್ತಿಯ ಹೆಸರು, ವಯಸ್ಸು, ವಿಳಾಸ, ಮೊಬೈಲ್ ಸಂಖ್ಯೆ, ಪ್ರಯಾಣದ ವಿವರಗಳು ಹಾಗೂ ಕೊನೆಯದಾಗಿ ಸಂಪರ್ಕವಾದ ದಿನಾಂಕ ಮತ್ತು ಸ್ಥಳ ಸೇರಿದಂತೆ ಲಭ್ಯವಿರುವ ಎಲ್ಲ ಮಾಹಿತಿಯನ್ನು ಯಾವುದೇ ವಿಳಂಬವಿಲ್ಲದೆ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾರವಾರ | ಕೈಗಾ ರಸ್ತೆಯಲ್ಲಿ ಭಾರಿ ವಾಹನಗಳಿಗೆ ಕಡಿವಾಣ; ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ
ನಾಪತ್ತೆಯಾಗಿರುವವರು ಅಥವಾ ಸಂಕಷ್ಟದಲ್ಲಿರುವವರ ಪತ್ತೆ, ಸುರಕ್ಷತೆ ಹಾಗೂ ಅಗತ್ಯ ನೆರವು ಒದಗಿಸುವುದರ ಜೊತೆಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ತ್ವರಿತ ಸಮನ್ವಯ ಸಾಧಿಸಲು ಸಾರ್ವಜನಿಕರಿಂದ ಲಭ್ಯವಾಗುವ ಮಾಹಿತಿಯು ಸಹಕಾರಿಯಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮಾಹಿತಿ ನೀಡಲು ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಕಾರ್ಯಾಚರಣೆ ಕೇಂದ್ರ (DEOC) ಸಹಾಯವಾಣಿ 08382-229857, ಉಚಿತ ಸಹಾಯವಾಣಿ 1077, ಮೊಬೈಲ್ ಸಂಖ್ಯೆ 9483511015 ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಸಹಾಯವಾಣಿ 080-22253707 ಅನ್ನು ಸಂಪರ್ಕಿಸಬಹುದಾಗಿದೆ.
ಅದೇ ರೀತಿ, ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಇ-ಮೇಲ್ [email protected] ಮೂಲಕವೂ ಮಾಹಿತಿ ನೀಡಬಹುದು. ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಹಾಯವಾಣಿ ಸಂಖ್ಯೆಗಳಾದ +977 9851316807, +977 9709107500 ಹಾಗೂ +977 9810326117 ಗಳಿಗೂ ಸಂಪರ್ಕಿಸಬಹುದಾಗಿದೆ.
ನಾಪತ್ತೆಯಾಗಿರುವವರ ಪತ್ತೆ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಸಾರ್ವಜನಿಕರು ವಿಳಂಬ ಮಾಡದೆ ಜಿಲ್ಲಾಡಳಿತಕ್ಕೆ ತಿಳಿಸುವಂತೆ ಮನವಿ ಮಾಡಲಾಗಿದೆ.




