ಮೂರು ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯ ವಿಶೇಷ ಗಳಿಗೆಗೆ ಸಾಕ್ಷಿಯಾಗುತ್ತಿದೆ. ವಿಜಯನಗರ ಜಿಲ್ಲೆ ಹೊಸಪೇಟೆ ಬಳಿಯ ಟಿಬಿ ಡ್ಯಾಂ ಕ್ರಸ್ಟ್ ಗೇಟ್‌ಗಳ ಉದ್ಘಾಟನೆಗೆ ಕ್ಷಣ ಗಣನೆ ಶುರುವಾಗಿದ್ದು, ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಮಹಾ ಸಂಗಮಕ್ಕೆ ಮುನ್ನುಡಿ ಬರೆಯುತ್ತಿದೆ.
ಜಲಸಂಪನ್ಮೂಲ ಇಲಾಖೆ ಹಾಗೂ ತುಂಗಭದ್ರಾ ಮಂಡಳಿ ಸಹಯೋಗದಲ್ಲಿ ಟಿಬಿ ಡ್ಯಾಂಗೆ 33 ಸ್ಟೀಲ್ ವೇ ಗೇಟ್‌ಗಳನ್ನು ಅಳವಡಿಸಲಾಗಿದೆ. ಜೂನ್ 25ರಂದು ಉದ್ಘಾಟನೆ ಆಗಲಿದ್ದು, ಕರ್ನಾಟಕ ಸಿಎಂ ಡಿ.ಕೆ.ಶಿವಕುಮಾರ್, ಆಂದ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಭಾಗಿಯಾಗಲಿದ್ದಾರೆ. ಈಗಾಗಲೇ ಮುನಿರಾಬಾದ್ ನಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವ ಬೃಹತ್ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ.
51 ಕೋಟಿ ರೂ. ವೆಚ್ಚದಲ್ಲಿ ಗೇಟ್‌ಗಳ ಅಳವಡಿಕೆ:
ಕ್ರಸ್ಟ್ ಗೇಟ್‌ಗಳು ಹಾಗೂ ಚೈನ್ ಸೇರಿದಂತೆ ಅಳವಡಿಕೆ ಕಾಮಗಾರಿಗೆ ಸುಮಾರು 51 ಕೋಟಿ ರೂಪಾಯಿ ವೆಚ್ಚವಾಗಿದೆ. ಇದರಲ್ಲಿ ಶೇ.64ರಷ್ಟು ಅಂದರೆ 32.64 ಕೋಟಿ ರೂಪಾಯಿ ಪಾಲು ಕರ್ನಾಟಕ ಸರ್ಕಾರದ್ದಾಗಿದ್ದು, ಉಳಿದ ವೆಚ್ಚವನ್ನು ಅಂದರೆ 17.85 ಕೋಟಿ ರೂಪಾಯಿಗಳನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಭರಿಸಲಿವೆ.
ಮುಂಗಾರು ವಿಳಂಬ ಆತಂಕದಲ್ಲಿ ರೈತರು
107 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಸದ್ಯ ನೀರಿನ ಸಂಗ್ರಹ ಕಡಿಮೆಯಿದೆ. ಜೂನ್ ಅಂತ್ಯಕ್ಕೆ ಜಲಾಶಯ ಬಹುತೇಕ ತುಂಬಬೇಕಿತ್ತು. ಆದರೆ, ಮುಂಗಾರು ಮಳೆಯ ಕೊರತೆಯಿಂದ ಒಳಹರಿವು ನಿರೀಕ್ಷಿತ ಮಟ್ಟದಲ್ಲಿಲ್ಲ. ಡ್ಯಾಂ ಅಕ್ಕಪಕ್ಕ ಜಮೀನು ಹೊಂದಿರುವ ರೈತರು ಕಾಲುವೆ ನೀರಿಗಾಗಿ ಕಾದು ಕುಳಿತಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಹೀಗಾಗಿ ಭತ್ತ ಬಿತ್ತನೆ ಮಾಡುವ ರೈತರಲ್ಲಿ ಆತಂಕ ಮನೆ ಮಾಡಿದೆ.




