ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ದಕ್ಷಿಣ ದೆಹಲಿಯ ಛತ್ತರ್‌ಪುರ ಮೆಟ್ರೊ ನಿಲ್ದಾಣದ ಬಳಿಯ ಫುಟ್‌ಪಾತ್ ಮೇಲೆ ತನ್ನ ಪೋಷಕರೊಂದಿಗೆ ನಿದ್ರಿಸುತ್ತಿದ್ದ 11 ವರ್ಷದ ಬಾಲಕಿಯನ್ನು ಕ್ಯಾಬ್ ಚಾಲಕನೊಬ್ಬ ಅಪಹರಿಸಿ, ಅತ್ಯಾಚಾರವೆಸಗಿ ಬಳಿಕ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಭೀಕರ ಕೃತ್ಯವು ಇಡೀ ನಾಗರಿಕ ಸಮಾಜವೇ ಬೆಚ್ಚಿಬೀಳುವಂತೆ ಮಾಡಿದ್ದು, ನಗರದಲ್ಲಿ ಮಹಿಳಾ ಸುರಕ್ಷತೆಯ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಮೂಲಗಳ ಪ್ರಕಾರ, ಬಾಲಕಿಯ ಪೋಷಕರು ದಿನಗೂಲಿ ಕಾರ್ಮಿಕರಾಗಿದ್ದು, ವಸತಿಯಿಲ್ಲದ ಕಾರಣ ಸೋಮವಾರ ಮುಂಜಾನೆ ಫುಟ್‌ಪಾತ್ ಮೇಲೆಯೇ ಮಲಗಿದ್ದರು. ಬೆಳಗಿನ ಜಾವ ಸುಮಾರು 4.15ರ ವೇಳೆಗೆ ಅಲ್ಲಿಗೆ ಬಿಳಿ ಬಣ್ಣದ ಕಾರಿನಲ್ಲಿ ಬಂದ 29 ವರ್ಷದ ಕ್ಯಾಬ್ ಚಾಲಕ ಬಶು ಕುಮಾರ್ ಸಿಂಗ್ ಎಂಬಾತ, ಯಾರಿಗೂ ಎಚ್ಚರವಾಗದಂತೆ ನಿದ್ರೆಯಲ್ಲಿದ್ದ ಅಮಾಯಕ ಬಾಲಕಿಯನ್ನು ಅಪಹರಿಸಿದ್ದ. ಪೋಷಕರು ಎಚ್ಚರಗೊಂಡು ನೋಡಿದಾಗ ಮಗಳು ನಾಪತ್ತೆಯಾಗಿದ್ದು, ಬೆಳಿಗ್ಗೆ 4.58ಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಗಾಂಜಾ ಮತ್ತಿನಲ್ಲಿದ್ದ ಆರೋಪಿ, ಬಾಲಕಿಯನ್ನು ಫರಿದಾಬಾದ್-ಗುರುಗ್ರಾಮ ರಸ್ತೆಯ ನಿರ್ಜನ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಪಾಶವೀವಾಗಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಬಟ್ಟೆಯಿಂದ ಕತ್ತು ಬಿಗಿದು, ಎದೆಗೆ ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಯಾರಿಗೂ ಅನುಮಾನ ಬಾರದಂತೆ ಹಾಗೂ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಕಲ್ಲುಗಳ ಅಡಿಯಲ್ಲಿ ಮುಚ್ಚಿಟ್ಟು ಅಲ್ಲಿಂದ ಪರಾರಿಯಾಗಿದ್ದ ಎಂಬ ಆಘಾತಕಾರಿ ಅಂಶ ತನಿಖೆ ವೇಳೆ ಬಯಲಾಗಿದೆ.
ಈ ಪೈಶಾಚಿಕ ಕೃತ್ಯವೆಸಗಿದ ಬಳಿಕವೂ ಆರೋಪಿಯು ಯಾವುದೇ ಪಶ್ಚಾತ್ತಾಪವಿಲ್ಲದೆ ಅತ್ಯಂತ ಸಹಜವಾಗಿ ವರ್ತಿಸಿದ್ದಾನೆ. ಮೃತದೇಹವನ್ನು ಕಲ್ಲುಗಳಡಿ ಮುಚ್ಚಿಟ್ಟ ಬಳಿಕ ಆತ ಕ್ಯಾಬ್‌ನಲ್ಲಿ ಮತ್ತೊಬ್ಬ ಪ್ರಯಾಣಿಕನನ್ನು ಹತ್ತಿಸಿಕೊಂಡು ಹೋಗಿ ಆತನ ಸ್ಥಳಕ್ಕೆ ಬಿಟ್ಟಿದ್ದಾನೆ. ಆತ ಎಸಗಿದ್ದ ಘೋರ ಅಪರಾಧದ ಸಣ್ಣ ಸುಳಿವೂ ಆತನ ವರ್ತನೆಯಲ್ಲಿರಲಿಲ್ಲ. ಅಂತಿಮವಾಗಿ ಪಶ್ಚಿಮ ದೆಹಲಿಯ ವಿಕಾಸ್‌ಪುರಿಯಲ್ಲಿ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಿಹಾರ ಮೂಲದವನಾದ ಆರೋಪಿಗೆ ವಿವಾಹವಾಗಿದ್ದು, ಮಕ್ಕಳೂ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಆತ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದೆ, ಕೃತ್ಯದ ಬಗ್ಗೆ ಪದೇಪದೇ ಹೇಳಿಕೆಗಳನ್ನು ಬದಲಾಯಿಸುತ್ತಿದ್ದ. ಅಂತಿಮವಾಗಿ ಸೋಮವಾರ ಸಂಜೆ ಆತನೇ ಪೊಲೀಸರನ್ನು ಗುರುಗ್ರಾಮದ ಅಪರಾಧ ಸ್ಥಳಕ್ಕೆ ಕರೆದೊಯ್ದಿದ್ದು, ಅಲ್ಲಿ ಬಾಲಕಿಯ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ಕಾರು ಮತ್ತು ಘಟನಾ ಸ್ಥಳದಿಂದ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಸಿಬ್ಬಂದಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಈ ಘಟನೆಯು ಬೀದಿಯಲ್ಲಿ ವಾಸಿಸುವ ನಿರ್ಗತಿಕರ ಹಾಗೂ ಮಕ್ಕಳ ಭದ್ರತೆಯ ವ್ಯವಸ್ಥೆಯ ಬಗ್ಗೆ ತೀವ್ರ ಕಳವಳ ಮೂಡಿಸಿದೆ. ಪ್ರಸ್ತುತ ಪೊಲೀಸರು ಆರೋಪಿ ವಿರುದ್ಧ ಹೊಸ ಕ್ರಿಮಿನಲ್ ಕಾಯ್ದೆಯಾದ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ಅತ್ಯಾಚಾರ, ಅಪಹರಣ ಮತ್ತು ಕೊಲೆ ಹಾಗೂ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಮುಕನಿಗೆ ಗರಿಷ್ಠ ಶಿಕ್ಷೆ ಖಚಿತಪಡಿಸಲು ಆದಷ್ಟು ಬೇಗ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.




