ಲೈಂಗಿಕ ದೌರ್ಜನ್ಯ ಆರೋಪ ಹೊತ್ತುಕೊಂಡು ವಿದೇಶದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ರಾಜ್ಯದ ಎರಡನೇ ಹಂತದ ಮತದಾನ ನಡೆದ ಮೇಲೆಯೇ ಎಸ್‌ಐಟಿ ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಏಪ್ರಿಲ್ 27ರಿಂದ ಇಲ್ಲಿವರೆಗೂ ವಿದೇಶದಲ್ಲಿದ್ದುಕೊಂಡೇ ಕಾನೂನು ತಜ್ಞರ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ. ವಕೀಲರ ಸಲಹೆ ಮೇರೆಗೆ ಸಂಸದ ಪ್ರಜ್ವಲ್ ರೇವಣ್ಣ ಮೇ 10ರೊಳಗೆ ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಎಚ್ ಡಿ ರೇವಣ್ಣಗೆ ಅಗ್ನಿ ಪರೀಕ್ಷೆ
ಮಾಜಿ ಸಚಿವ ಹೆಚ್ ಡಿ ರೇವಣ್ಣ ಮತ್ತೆ ಜನಪ್ರತಿನಿದಿಗಳ ವಿಶೇಷ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಅರ್ಜಿ ಸಲ್ಲಿಸಿರುವ ರೇವಣ್ಣಗೆ ಇಂದು ಅಗ್ನಿ ಪರೀಕ್ಷೆ ಎದುರಾಗಲಿದೆ. ಇದಕ್ಕೂ ಮುನ್ನ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲೂ ನಿರೀಕ್ಷಣಾ ಜಾಮೀನಿಗೆ ಅವರು ಅರ್ಜಿ ಸಲ್ಲಿಸಿ, ಗಂಭೀರ ಆರೋಪ ಯಾವುದೂ ಇಲ್ಲದ ಕಾರಣ ಆ ಅರ್ಜಿ ವಾಪಸ್ ಪಡೆದಿದ್ದರು.
ಆದರೆ ಈಗ ರೇವಣ್ಣ ವಿರುದ್ಧ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ಮಹಿಳೆಯ ಕಿಡ್ನಾಪ್ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಎರಡನೇ ಆರೋಪಿಯನ್ನು ಈಗಾಗಲೇ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ವಹಿಸಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದರೆ ರೇವಣ್ಣಗೂ ಬಂಧನ ಭೀತಿ ಎದುರಾಗಲಿದೆ.
ಈ ನಡುವೆ ಶನಿವಾರ ಸಂಜೆಯೊಳಗೆ ವಿಚಾರಣೆಗೆ ಹಾಜರಾಗಲು ರೇವಣ್ಣಗೆ ಎಸ್‌ಐಟಿ ಎರಡನೇ ನೋಟಿಸ್ ನೀಡಿದೆ. ನಿರೀಕ್ಷಣಾ ಜಾಮೀನು ಆಧರಿಸಿ ರೇವಣ್ಣ ವಿಚಾರಣೆಗೆ ಹಾಜರಾಗುತ್ತರಾ ಇಲ್ಲವಾ ಎಂಬುದು ಕಾದುನೋಡಬೇಕು.