ಕಾಲುವೆಗಳ ಕ್ಲೋಸರ್ ಕಾಮಗಾರಿಯನ್ನು ಸಕಾಲಕ್ಕೆ ಕೈಗೆತ್ತಿಕೊಂಡು ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘ (ರಿ) ಪದಾಧಿಕಾರಿಗಳು ಒತ್ತಾಯಿಸಿದರು.
ಈ ಕುರಿತು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮೂಲಕ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ವ್ಯಾಪ್ತಿಯಲ್ಲಿನ ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳು, ಗಿಡಗಂಟಿ ಮತ್ತು ಮುಳ್ಳುಗಳನ್ನು ತೆರವುಗೊಳಿಸುವ ಕ್ಲೋಸರ್ ಕಾಮಗಾರಿಯನ್ನು ಸಮಯಕ್ಕೆ ಪ್ರಾರಂಭಿಸಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು ಎಂದರು. ಪ್ರತಿ ವರ್ಷ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಕಾಲುವೆಗಳ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂದು ದೂರಿದರು.
ಇದನ್ನು ಓದಿದ್ದೀರಾ? ಬಾಗಲಕೋಟೆ | ನವನಗರ ಬೌದ್ಧ ವಿಹಾರಕ್ಕೆ ಸಚಿವರ ಭೇಟಿ: ಅಭಿವೃದ್ಧಿಗೆ ಭರವಸೆ
ಒಡೆದ ಕಾಲುವೆಗಳ ದುರಸ್ತಿ, ವಿತರಣಾ ಕಾಲುವೆಗಳ ನಿರ್ವಹಣೆ ಸರಿಯಾಗಿ ನಡೆಯದ ಕಾರಣ ಸಾವಿರಾರು ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹ ಇದ್ದರೂ ರೈತರಿಗೆ ಅಗತ್ಯ ಸಮಯದಲ್ಲಿ ನೀರು ಒದಗಿಸಲಾಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದರು.ಆದ್ದರಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ ತಕ್ಷಣವೇ ಕ್ಲೋಸರ್ ಕಾಮಗಾರಿ ಆರಂಭಿಸಿ ಕಾಲುವೆ ಜಾಲದ ಕೊನೆ ಭಾಗದವರೆಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸವನ ಬಾಗೇವಾಡಿ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಬಸವನ ಬಾಗೇವಾಡಿ ತಾಲೂಕಾ ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಸೋಮೇಶ ನಾಗರೆಡ್ಡಿ, ಮಲ್ಲನಗೌಡ ಮೇಟಿ, ಮಾಳಪ್ಪ ಪೂಜಾರಿ, ಲಂಕೇಶ ತಳವಾರ, ಸಂಗು ಚಲವಾದಿ, ಸಿದ್ದು ಹಿರೇಮಠ, ಮಲ್ಲಿಕಾರ್ಜುನ ಭಜಂತ್ರಿ, ಮಡಿವಾಳಪ್ಪ ನಾಗರೆಡ್ಡಿ, ಶ್ರೀಶೈಲ ಕುರಣದ, ವಿಠಲ ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.




