ಯೇಸು ಕ್ರಿಸ್ತರು ಶಿಲುಬೆಗೇರಿ ಪುನರುತ್ಥಾನರಾದ ಈಸ್ಟರ್ ಜಾಗರಣೆ ಶನಿವಾರ ರಾತ್ರಿ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಜರಗಿತು.
ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಸಂಭ್ರಮದಿಂದ ನಡೆಯಿತು. ಈ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ.ಪ್ರದೀಪ್ ಕಾರ್ಡೋಜಾ ಸಂಪದ ನಿರ್ದೇಶಕ ವಂ|ರೆಜಿನಾಲ್ಡ್ ಪಿಂಟೊ, ಪಿಲಾರ್ ಸಭೆಯ ವಂ|ಪರೇಲ್, ಅತಿಥಿ ಧರ್ಮಗುರು ವಂ|ಪೀಟರ್ ಮೆಂಡೊನ್ಸಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲ್ ಹಚ್ಚಿ ಮೆರವಣಿಗೆ ಯಲ್ಲಿ ಸಾಗಿ ಬಂದು ಚರ್ಚ್ನ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಹಳೆ ಹಾಗೂ ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನ ಮಾಡಲಾಯಿತು. ಧರ್ಮಾಧ್ಯಕ್ಷರು ಮತ್ತು ಧರ್ಮಗುರುಗಳು ಹೊಸ ನೀರನ್ನು ಆಶೀರ್ವಚನ ನೆರವೇರಿಸಿ ನೆರೆದ ಭಕ್ತಾದಿಗಳ ಮೇಲೆ ಪ್ರೊಕ್ಷಿಸಿ ಆಶೀರ್ವದಿಸಿ ದರು.
ಬಳಿಕ ನಡೆದ ಬಲಿಪೂಜೆಯಲ್ಲಿ ಯೇಸುವಿನ ಕಷ್ಟಗಳು, ಪುನರುತ್ಥಾನದ ಸಂದೇಶವನ್ನು ವಿವರಿಸಿದ ಧರ್ಮಗುರು ಗಳು, ಕ್ರೈಸ್ತ ವಿಶ್ವಾಸ, ಸತ್ಯದ ಮರು ದೃಡೀಕರಣ ನಡೆಸಿದರು. ಬಲಿಪೂಜೆಯ ಬಳಿಕ ಭಾಗವಹಿಸಿದ ಕ್ರೈಸ್ತರು ಈಸ್ಟರ್ ಹಬ್ಬದ ಶುಭಾಶಯ ಮಾಡಿ ಸಂಭ್ರಮಿಸಿದರು.
ಈ ವೇಳೆ ಆಶೀರ್ವಚನ ನೀಡಿದ ಬಿಷಪ್ ಜೆರಾಲ್ಡ್ ಲೋಬೊ ಯೇಸುಕ್ರಿಸ್ತರ ಪುನರುತ್ಥಾನದಿಂದ ಜಗತ್ತಿನಲ್ಲಿ ಸಂತಸ ಮತ್ತು ಭರವಸೆಯನ್ನು ತಂದಿತು. ಯೇಸು ಸ್ವಾಮಿಯ ಮರಣದಿಂದ ಭರವಸೆ ಕಳೆದುಕೊಂಡ ಶಿಷ್ಯರಿಗೆ ಅವರ ಪುನರುತ್ಥಾನದಿಂದ ಚೈತನ್ಯ ತಂದಿತು. ಯೇಸು ಸ್ವಾಮಿಯ ಮರಣ ಮತ್ತು ಪುನರುತ್ಥಾನದ ಘಟನೆ ಕ್ರೈಸ್ತ ಧರ್ಮದ ನೈಜ ತಿರುಳು. ಯೇಸು ಕ್ರಿಸ್ತರ ಪುನರುತ್ಥಾನವು ಕೇವಲ ಒಂದು ಐತಿಹಾಸಿಕ ಘಟನೆಯಲ್ಲ, ಅದು ಜಗತ್ತಿಗೆ ಭರವಸೆ ಮತ್ತು ಶಾಂತಿಯ ಸಂಕೇತವಾಗಿದೆ. ಜಗತ್ತಿನ ದೇಶಗಳಲ್ಲಿ ನಡೆಯುತ್ತಿರುವ ಯುದ್ದ ಕಲಹ ಮಾನವ ಜೀವಗಳಿಗೆ ಹಾನಿಗೊಳಿಸಿದ್ದು ವಿಶ್ವದ ನಾಯಕರು ಶಾಂತಿಯ ಮೂಲಕ ಬಗೆಹರಿಸಲು ಪ್ರಯತ್ನಿಸಲಿ ಎಂದು ಪ್ರಾರ್ಥಿಸಿದರು.
ಕ್ರೈಸ್ತರು ವಿಭೂತಿ ಬುಧವಾರದಿಂದ ಆರಂಭಿಸಿ 40 ದಿನಗಳ ಉಪವಾಸ ವ್ರತ ಹಾಗೂ ಧ್ಯಾನದಲ್ಲಿ ಯೇಸುವಿನ ಕಷ್ಟಗಳನ್ನು ನೆನೆದು ಈಸ್ಟರ್ ಹಬ್ಬದಂದು ಯೇಸುವಿನ ಪುನರುತ್ಥಾನಗೊಳ್ಳವುದರ ಮೂಲಕ ತಿಂಗಳ ಕಷ್ಟಗಳ ತಪಸ್ಸಿಗೆ ಕೊನೆ ಹೇಳುತ್ತಾರೆ. ಈಸ್ಟರ್ ಹಬ್ಬವೂ ಕೂಡ ಕ್ರಿಸ್ಮಸ್ ಹಬ್ಬದಂತೆ ಕ್ರೈಸ್ತರಿಗೆ ಪ್ರಮುಖ ಹಬ್ಬವಾಗಿದೆ.





