ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ದೊರೆಯಲಿದ್ದು, ಆಯುರ್ವೇದ ವೈದ್ಯಕೀಯ ಪದವೀಧರರಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿವೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಕೊನರಡ್ಡಿ ಜೆ.ಬಿ. ಹೇಳಿದರು.
ಬಾಗಲಕೋಟೆ ನಗರದ ಬಿವಿವಿಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಆಯೋಜಿಸಿದ್ದ ‘ಉತ್ಕರ್ಷ್-2026’ ಬಿ.ಎ.ಎಂ.ಎಸ್. ಪದವೀಧರರ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆಯುರ್ವೇದ ತನ್ನದೇ ಆದ ಪರಂಪರೆ ಮತ್ತು ಮಹತ್ವ ಹೊಂದಿದ್ದು, ಜನತೆ ಆಯುರ್ವೇದ ಚಿಕಿತ್ಸೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಪದವೀಧರರು ಉತ್ತಮ ಆರೋಗ್ಯ ಸೇವೆ ನೀಡುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಡಾ. ಸಂತೋಷ್ ಎಲ್. ಯಡಹಳ್ಳಿ ಪದವೀಧರರಿಗೆ ಪ್ರಮಾಣ ವಚನ ಬೋಧಿಸಿ, ವೈದ್ಯಕೀಯ ವೃತ್ತಿ ಸೇವಾ ಮನೋಭಾವದಿಂದ ಕೂಡಿರಬೇಕು. ರೋಗಿಗಳ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ. ಶಂಕರಗೌಡ ಪಾಟೀಲ ಮಾತನಾಡಿ, ಪದವಿ ಪೂರ್ಣಗೊಂಡ ಬಳಿಕವೇ ಜೀವನದ ನಿಜವಾದ ಪರೀಕ್ಷೆ ಆರಂಭವಾಗುತ್ತದೆ. ತಾಳ್ಮೆ, ನಿರಂತರ ಪ್ರಯತ್ನ ಹಾಗೂ ಆತ್ಮವಿಶ್ವಾಸ ಯಶಸ್ಸಿಗೆ ಸಹಕಾರಿಯಾಗುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಎಸ್. ಸಾಸನೂರ ಮಾತನಾಡಿ, ಬಿವಿವಿಎಸ್ ಆಯುರ್ವೇದ ಕಾಲೇಜು ಈ ಭಾಗದ ಜನರಿಗೆ ಉತ್ತಮ ಚಿಕಿತ್ಸಾ ಸೇವೆ ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಒಟ್ಟು 64 ಬಿ.ಎ.ಎಂ.ಎಸ್. ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.ಡಾ. ರವಿ ಹೊಸಮನಿ ಸ್ವಾಗತಿಸಿದರು. ಡಾ. ಎಂ.ಎಸ್. ಹಿರೇಮಠ ವಂದಿಸಿದರು. ಮಹಾಲಕ್ಷ್ಮೀ ಸಂಗಡಿಗರು ಪ್ರಾರ್ಥಿಸಿದರು.





