ಸಿದ್ಧಾಂತವಿಲ್ಲದ ಶಾಸಕರು ಎಂದು ಹೇಳುವ ಬಿಜೆಪಿ ಮುಖಂಡರು ಮೊದಲು ನಿಮ್ಮ ಸಿದ್ಧಾಂತ ಆತ್ಮಾವಲೋಕನ ಮಾಡಿಕೊಳ್ಳಬೇಕು, ಗ್ರಾಮ ಪಂಚಾಯತಿ ಚುನಾವಣೆ ಗೆಲ್ಲಲೂ ಜನ ಬೆಂಬಲ ಇಲ್ಲದವರಿಂದ ನಮ್ಮ ಶಾಸಕರು ನೀತಿ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಇಂಡಿ ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ ಟೀಕಿಸಿದ್ದಾರೆ.
“ಜನಾದೇಶದ ಮೂಲಕ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಕ್ಷೇತ್ರದಲ್ಲಿ ದೂರದೃಷ್ಟಿಯಿಂದ ಮಾಡಿದ ಅಭಿವೃದ್ಧಿ ಕೆಲಸಗಳು ಮಾಡಿದ್ದಾರೆ. ಶಾಸಕರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ಸಹಿಸದೇ ಇಂತಹ ಹೇಳಿಕೆಗಳು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಭಿವೃದ್ಧಿ ಅಂದರೆ ಏನು ಎಂಬ ಗಂಧ ಗೊತ್ತಿಲ್ಲದ, ಮುಖಂಡರು ಇಂಡಿ ತಾಲ್ಲೂಕನ್ನು ಜಿಲ್ಲೆಯಾಗಿಸುವ ಪ್ರಸ್ತಾವನೆ ವಿರೋಧಿಸುತ್ತಿರುವುದೆ ಉದಾಹರಣೆ” ಎಂದಿದ್ದಾರೆ.
“ಉಪ ವಿಭಾಗ ಇರುವ ತಾಲೂಕುಗಳು ಜಿಲ್ಲೆಯಾಗುತ್ತದೆ ಎಂಬ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿರುವುದು ಅವರ ಜಾಣ್ಮೆಗೆ ಹಿಡಿದ ಕನ್ನಡಿ. ಹಿಂದೆ ಸಾಕಷ್ಟು ಜನರು ಶಾಸಕರಾಗಿದ್ದಾರೆ ಅವರು ಈ ಪ್ರಸ್ತಾಪ ಮಾಡಬೇಕಿತ್ತಲ್ಲ ಎಂದು ಪ್ರಶ್ನಿಸಿದ ಅವರು, ತಾಲೂಕು ಕೇಂದ್ರದಲ್ಲಿ ಒಂದು ಸರ್ಕಾರಿ ಪಿಯು ಕಾಲೇಜು ತರಲು ಆಗಲಿಲ್ಲ. ಈಗ ಇಂಡಿಯ ಅಭಿವೃದ್ಧಿ ಕಂಡು ಹತಾಶರಾಗಿ ಶಾಸಕರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ” ಎಂದು ಅಭಿಪ್ರಾಯಿಸಿದರು.
“ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಂವಿಧಾನಿಕ ಸಂಸ್ಥೆಯಾದ ಚುನಾವಣ ಆಯೋಗವನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಪ್ರಪಂಚದ ಎಲ್ಲಾ ಪಕ್ಷದ ನಾಯಕರಿಗೆ ಗೊತ್ತಿದೆ” ಎಂದು ಟೀಕಿಸಿದರು.
ಇದನ್ನೂ ಓದಿ> ಬಂಗಾಳದ ಮತುವಾಗಳು ಯಾರು? ಎಸ್‌ಐಆರ್‌ಗೆ ಇವರೇಕೆ ಬಲಿಪಶುಗಳು!
“ಯಶವಂತರಾಯಗೌಡ ಪಾಟೀಲ ಅವರು ಶಾಸಕರಾದ ಮೇಲೆ ಇಂಡಿ ತಾಲೂಕಿನಲ್ಲಿ ಶೇ.80ರಷ್ಟು ನೀರಾವರಿ ಸೌಕರ್ಯ ಸಾಧಿತವಾಗಿದೆ. ಬೇಸಿಗೆಯಲ್ಲಿಯೂ ಭೀಮಾನದಿಗೆ ನೀರು ಹರಿಸಿದ್ದು ಶಾಸಕ ಯಶವಂತರಾಯಗೌಡ ಪಾಟೀಲ, ಪ್ರಸ್ತುತ ಮತಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿಗೆ ಕೊಡುಗೆ ನೀಡಿರುವ ಶಾಸಕರ ಕುರಿತು ಉಢಾಫೆಯ ಮಾತನಾಡಿದರೆ ಕ್ಷೇತ್ರದ ಜನತೆ ಬಿಜೆಪಿ ಮುಖಂಡರಿಗೆ ತಕ್ಕಪಾಠ ಕಲಿಸುತ್ತಾರೆ” ಎಂದು ಅಭಿಪ್ರಾಯಿಸಿದರು.
“ನೀವು ಮಾಡುತ್ತಿರುವ ಸುಳ್ಳು ಆಪಾದನೆಗಳನ್ನು ಕ್ಷೇತ್ರದ ಜನತೆ ಒರೆಗಲ್ಲಿಗೆ ಹಚ್ಚಿ ನೋಡುತ್ತಾರೆ ವಿನಃ ನಿಮ್ಮ ಆರೋಪಗಳನ್ನು ನಿಜವೆಂದು ನಂಬಲಾರರು” ಎಂದು ಹೇಳಿದರು.




