ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಎರಡು ವಿದ್ಯಾರ್ಥಿ ವಸತಿ ನಿಲಯಗಳ ನೂತನ ಕಟ್ಟಡ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸಿಂದಗಿ-ಆಲಮೇಲಿ ನಡುವಿನ ಹೂವಿನಹಳ್ಳಿ ಗ್ರಾಮದ ಬಳಿ 8 ಎಕರೆ ಪ್ರದೇಶದಲ್ಲಿ ರೂ. 34 ಕೋಟಿ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು” ಎಂದು ತಿಳಿಸಿದರು.
ಹಿಂದಿನ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರು ಶಿಥಿಲಾವಸ್ಥೆಯಲ್ಲಿದ್ದ ಸರ್ಕಾರಿ ವಸತಿ ನಿಲಯಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಒಟ್ಟು ರೂ. 11.90 ಕೋಟಿ ಅನುದಾನ ಮಂಜೂರು ಮಾಡಿರುವುದನ್ನು ಅವರು ಸ್ಮರಿಸಿದರು.
ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಪ್ರತಿ ವರ್ಷ ರೂ. 60 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ರೂ. 1.43 ಲಕ್ಷ ಕೋಟಿ ಖರ್ಚು ಮಾಡಲಾಗಿದ್ದು, ಸಿಂದಗಿ ಕ್ಷೇತ್ರದಲ್ಲೇ ಪ್ರತಿ ವರ್ಷ ರೂ. 224 ಕೋಟಿ ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ ಹಾಗೂ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಮಾಡಿರುವ ಟೀಕೆಗೆ ತಿರುಗೇಟು ನೀಡಿದ ಶಾಸಕ ಮನಗೂಳಿ, “ಸಮಯ ಇದ್ದರೆ ಸರ್ಕಾರದ ಖಜಾನೆಯ ಲೆಕ್ಕವನ್ನು ತೋರಿಸಲು ಸಿದ್ಧನಿದ್ದೇನೆ” ಎಂದು ಹೇಳಿದರು.
ಕಳೆದ ಮೂರು ವರ್ಷಗಳ ಎರಡು ತಿಂಗಳ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳ ಸೌಲಭ್ಯ ತಲುಪಿಸುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಜಾಗೃತಿ ದಳದ ಸದಸ್ಯ ರಾಜಶೇಖರ ಕೂಚಬಾಳಿ ಮಾತನಾಡಿ, ಶಾಸಕ ಅಶೋಕ ಮನಗೂಳಿ ಅವರು ವರ್ಷದಲ್ಲಿ ಪ್ರತಿದಿನ ಒಂದೊಂದು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಐದು ವರ್ಷಗಳಲ್ಲಿ 1,825 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಂಕಲ್ಪ ಹೊಂದಿರುವುದು ಕ್ಷೇತ್ರದ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಸಂಸ ಪ್ರಮುಖ ವೈ.ಸಿ. ಮಯೂರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಣಮಂತ ಸುಣಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.




