ಸಂಗಮ ಸಮಗ್ರ ಗ್ರಾಮೀಣಾಭಿವೃದ್ಧಿ ಕೇಂದ್ರ, ಸಿಂದಗಿ ವತಿಯಿಂದ ಅಸಂಘಟಿತ ಯುವಕ ಯುವತಿಯರಿಗಾಗಿ ಮಿನಿ ಯುವ ಸಂಗಮ ಕಾರ್ಯಕ್ರಮವನ್ನು ಆಯೋಜಿಸಿ, ‘ಸಾಮಾಜಿಕ ವಿಶ್ಲೇಷಣೆ’ ವಿಷಯದ ಕುರಿತು ಅರಿವು ಮೂಡಿಸಲಾಯಿತು.
ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಪ್ರಿಯಾಂಕ ಮಾತನಾಡಿ, “ಇಂದಿನ ಯುವಜನತೆ ಸಂವಿಧಾನದ ಬಗ್ಗೆ ಸಮಗ್ರ ಅರಿವು ಹೊಂದಬೇಕು. ಸಮಾಜದಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು, ಕುಟುಂಬಕ್ಕೆ ಉತ್ತಮ ಮಕ್ಕಳಾಗಿಯೂ ದೇಶಕ್ಕೆ ಆದರ್ಶ ಪ್ರಜೆಗಳಾಗಿಯೂ ರೂಪುಗೊಳ್ಳಬೇಕು” ಎಂದು ತಿಳಿಸಿದರು.
ಅಂಕಣಕಾರ ಹಾಗೂ ಸಾಹಿತಿ ಎಂ.ಆರ್. ಡೊಣಿ ಮಾತನಾಡಿ, “ಯುವಕರು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶಪ್ರೇಮ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸಿಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ತಿಳಿದುಕೊಂಡು ಉತ್ತಮ ಸಂಸ್ಕಾರದಲ್ಲಿ ಬೆಳೆಯುವುದರ ಜೊತೆಗೆ ಹಿರಿಯರು ಮತ್ತು ಗುರುಗಳಿಗೆ ಗೌರವ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸಮಾಜಸೇವೆಗೆ ಸಂಗಮ ಸಂಸ್ಥೆ ನಿರಂತರವಾಗಿ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ ಮಾತನಾಡಿ, “ಯುವಕರಲ್ಲಿ ಪರಿಸರ ಜಾಗೃತಿ, ನೈತಿಕ ಮೌಲ್ಯಗಳು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಮಿನಿ ಯುವ ಸಂಗಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾಜದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದ್ದು, ಅವರು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಸವರಾಜ ಬಿಸಿನಾಳ ವಂದಿಸಿದರು. ರಾಜೀವ ಕುರಿಮನಿ ನಿರೂಪಿಸಿದರು. ರಾಜು ಕರಶೆಟ್ಟಿ ಸ್ವಾಗತಿಸಿದರು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸುಮಾರು 60 ಯುವಕ-ಯುವತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




