ಕೊರಟಗೆರೆ ವಿಧಾನಸಭಾ ಕ್ಷೇತ್ರದ ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೀರೆತೊಟ್ಲುಕೆರೆ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ಕಾಡುತ್ತಿದೆ. ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಆರೋಪಿಸಿದ್ದಾರೆ.
ಗ್ರಾಮಕ್ಕೆ ನೀರು ಪೂರೈಸುವ ಬೋರ್‌ವೆಲ್ ತಿಂಗಳಿಗೆ ಸರಾಸರಿ ಎರಡು ಬಾರಿ ಕೆಟ್ಟು ಹೋಗುತ್ತಿರುವುದರಿಂದ ದಿನಗಟ್ಟಲೆ ಕುಡಿಯುವ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಳವೆಬಾವಿ ದುರಸ್ತಿಗೆ ವಿಳಂಬವಾಗುವುದರಿಂದ ಮಹಿಳೆಯರು ಹಾಗೂ ವೃದ್ಧರು ದೂರದ ಪ್ರದೇಶಗಳಿಂದ ನೀರು ತಂದುಕೊಳ್ಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.
ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೇ ಸಮಸ್ಯೆ ಉಲ್ಬಣವಾಗಲು ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ದಲಿತ ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ್ ಮಿಷನ್ ಯೋಜನೆ ಈ ಗ್ರಾಮದಲ್ಲಿ ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿದ್ದು, ಯೋಜನೆಯ ಉದ್ದೇಶವೇ ವಿಫಲವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ವಿಶೇಷವೆಂದರೆ, ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ, ಉಪಮುಖ್ಯಮಂತ್ರಿಗಳಾದ ಜಿ. ಪರಮೇಶ್ವರ್ ಚುನಾಯಿತರಾಗಿದ್ದಾರೆ. ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಕಡೆ ಗಮನ ಕೊಡಬೇಕೆಂದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿ, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ದಲಿತ ಬಡಾವಣೆ ಸೇರಿದಂತೆ ಎಲ್ಲ ಮನೆಗಳಿಗೆ ಸಮಾನವಾಗಿ ನೀರು ಪೂರೈಕೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
“ನಮ್ಮ ಹೀರೆತೊಟ್ಲು ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ತಿಂಗಳಿಗೆ ಎರಡು ಬಾರಿ ಬೋರ್ ಕೆಟ್ಟು ಹೋಗುವುದರಿಂದ ಹಲವು ದಿನಗಳವರೆಗೆ ನೀರಿಲ್ಲದೆ ಪರದಾಡಬೇಕಾಗುತ್ತಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ದೂರದಿಂದ ನೀರು ತರುವ ಪರಿಸ್ಥಿತಿ ಇದೆ. ದಲಿತ ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಶಾಶ್ವತ ಪರಿಹಾರ ನೀಡಿಲ್ಲ. ಜಲ ಜೀವನ್ ಮಿಷನ್ ಯೋಜನೆ ನಮ್ಮ ಊರಿನಲ್ಲಿ ಕೇವಲ ಹೆಸರಿಗೆ ಮಾತ್ರ ಇದೆ. ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥ ನರಸಿಂಹಮೂರ್ತಿ ಈದಿನ ಡಾಟ್ ಕಾಮ್ ಗೆ ಪ್ರತಿಕ್ರಿಯಿಸಿದರು




