ದೇಶದಲ್ಲಿ 2019 ಮತ್ತು 2024ರ ನಡುವಿನ ಐದು ವರ್ಷಗಳ ಅವಧಿಯಲ್ಲಿ ರಸ್ತೆ ಅಪಘಾತಗಳಿಗೆ ಸಿಲುಕಿ 1.8 ಲಕ್ಷಕ್ಕೂ ಹೆಚ್ಚು ಪಾದಚಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರ್ಕಾರಿ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ವರದಿಯೊಂದು ತಿಳಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬಿಡುಗಡೆ ಮಾಡಿರುವ 2024ರ ಅಂಕಿ-ಅಂಶಗಳ ಪ್ರಕಾರ, ಒಟ್ಟು ಪಾದಚಾರಿಗಳ ಸಾವಿನಲ್ಲಿ ಸುಮಾರು 54%ರಷ್ಟು ಸಾವುಗಳು ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಡಿಕ್ಕಿ ಹೊಡೆದ ರಸ್ತೆ ಅಪಘಾತಗಳಿಂದ ಸಂಭವಿಸಿವೆ. ಇಂತಹ ಅಪಘಾತಗಳಲ್ಲೇ 19,680 ಜನರು ಬಲಿಯಾಗಿದ್ದಾರೆ. ರಸ್ತೆಯನ್ನು ಬಳಸುವವರಲ್ಲಿ ದ್ವಿಚಕ್ರ ವಾಹನ ಸವಾರರ ನಂತರ ಪಾದಚಾರಿಗಳೇ ಅತ್ಯಂತ ಅಪಾಯಕ್ಕೆ ಸಿಲುಕುವ ಎರಡನೇ ದೊಡ್ಡ ಗುಂಪಾಗಿದ್ದಾರೆ ಎಂದು ವರದಿಯು ಬಹಿರಂಗಪಡಿಸಿದೆ.
ದೇಶಾದ್ಯಂತ ಒಟ್ಟು 36,526 ಪಾದಚಾರಿಗಳ ಸಾವುಗಳು ದಾಖಲಾಗಿವೆ. ಭಾರತದಲ್ಲಿ ನಡೆಯುವ ಒಟ್ಟು ರಸ್ತೆ ಅಪಘಾತಗಳ ಸಾವಿನಲ್ಲಿ ಪಾದಚಾರಿಗಳ ಪಾಲು 20.6% ರಷ್ಟಿದೆ.
ವರದಿಯ ಪ್ರಕಾರ, ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ತಮಿಳುನಾಡು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ ಅತ್ಯಧಿಕ ಸಂಖ್ಯೆಯ 4,712 ಪಾದಚಾರಿಗಳು ಮೃತಪಟ್ಟಿದ್ದಾರೆ. ಆ ನಂತರದ ಸ್ಥಾನಗಳಲ್ಲಿ ಬಿಹಾರ 4,149 ಸಾವುಗಳು, ಮಹಾರಾಷ್ಟ್ರ 3,344 ಸಾವುಗಳು ಹಾಗೂ ಪಶ್ಚಿಮ ಬಂಗಾಳ 3,241 ಸಾವುಗಳನ್ನು ದಾಖಲಿಸಿವೆ.
ಈ ಆತಂಕಕಾರಿ ಅಂಕಿ-ಅಂಶಗಳ ನಡುವೆಯೇ, ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪೊಂದನ್ನು ನೀಡಿದೆ. ವ್ಯವಸ್ಥಿತವಾಗಿ ಗುರುತಿಸಲಾದ ಪಾದಚಾರಿ ಮಾರ್ಗಗಳಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕಾಗಿದೆ ಎಂದು ಸಾರಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಎ.ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು, ನಾಗರಿಕರಿಗೆ ಫುಟ್‌ಪಾತ್‌ಗಳ ಮೇಲೆ ನಡೆಯಲು ಇರುವ ಮೂಲಭೂತ ಹಕ್ಕು ಪ್ರಾಥಮಿಕವಾದದ್ದು. ಇಂಜಿನ್ ಚಾಲಿತ ವಾಹನಗಳ ಚಲನವಲನಗಳಿಗಿಂತ ಪಾದಚಾರಿಗಳಿಗೆ ಹೆಚ್ಚಿನ ಆದ್ಯತೆ ಇರಬೇಕು ಎಂದು ತೀರ್ಪು ನೀಡಿದೆ.



